ತಮಿಳುನಾಡು ರಾಜಕೀಯ ಹೈಡ್ರಾಮಗೆ ಇಂದು ತೆರೆ ಬೀಳುವ ಸಾಧ್ಯತೆ..?

Spread the love

Palaniswamy-Paneer-Selvam

ಚೆನ್ನೈ,ಫೆ.16-ಕಳೆದ ಹಲವು ದಿನಗಳಿಂದ ರಾಷ್ಟ್ರದ ಗಮನ ಸೆಳೆದಿದ್ದ ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದ್ದು, ಸರ್ಕಾರ ರಚಿಸಲು ರಾಜ್ಯಪಾಲ ವಿದ್ಯಾಸಾಗರ್‍ರಾವ್ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎ.ಪಳನಿಸ್ವಾಮಿ ಅವರನ್ನು ಆಹ್ವಾನಿಸಲು ತೀರ್ಮಾನಿಸಿದ್ದಾರೆ.   ಈಗಾಗಲೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡುವುದರ ಮೂಲಕ ತಮ್ಮ ಮೇಲೆ ಕೇಳಿ ಬರುತ್ತಿರುವ ಆಪಾದನೆಗಳಿಂದ ಮುಕ್ತರಾಗಲು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.  ಕಳೆದ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿದ ಹಾಲಿ ಲೋಕೋಪಯೋಗಿ ಸಚಿವರಾಗಿರುವ ಎಡಪ್ಪಾಡಿ ಪಳನಿಸ್ವಾಮಿ ತಮಗೆ 124 ಮಂದಿ ಶಾಸಕರ ಬೆಂಬಲವಿದೆ ಎಂಬ ಪತ್ರವನ್ನು ನೀಡಿದ್ದರು. ಸರ್ಕಾರ ರಚನೆಗೆ ಅವಕಾಶ ನೀಡುವಂತೆಯೂ ಮನವಿ ಮಾಡಿದ್ದರು.

ಇದೀಗ ಕಾನೂನು ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಿರುವ ರಾಜ್ಯಪಾಲರು ಪಳನಿಸ್ವಾಮಿಗೆ ಸರ್ಕಾರ ರಚಿಸಲು ಸಂಜೆ ಆಹ್ವಾನ ನೀಡುವ ಸಂಭವವಿದೆ. ಸಾಧವಾದರೆ ಇಂದು ಸಂಜೆಯೊಳಗೆ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.   ಮಧ್ಯಾಹ್ನದೊಳಗೆ ಮತ್ತೊಮ್ಮೆ ಶಾಸಕರ ಸಹಿಯುಳ್ಳ ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ತದನಂತರವೇ ಸರ್ಕಾರದ ರಚನೆಗೆ ಅವಕಾಶ ನೀಡಲಿದ್ದಾರೆ. ಕುದುರೆ ವ್ಯಾಪಾರ ನಡೆಯುವುದನ್ನು ತಪ್ಪಿಸುವ ಕಾರಣಕ್ಕಾಗಿಯೇ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳದೆ ಸಂವಿಧಾನದ ಚೌಕ್ಕಟ್ಟಿನಲ್ಲೇ ಬಿಕ್ಕಟ್ಟನ್ನು ಪರಿಹರಿಸುವ ಕಾರ್ಯ ರಾಜ್ಯಪಾಲರಿಂದ ನಡೆದಿದೆ.   ಒಂದು ವೇಳೆ ಎಡಪ್ಪಾಡಿ ಪಳನಿಸ್ವಾಮಿ ಇಂದು ಅಧಿಕಾರ ಸ್ವೀಕರಿಸಿದರೆ ಅವರಿಗೆ ಮುಂದಿನ 3-5 ದಿನದೊಳಗೆ ಮುಂದಿನ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಲಿದ್ದಾರೆ.
ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ನಾನು ಒತ್ತಡದಲ್ಲಿ ರಾಜೀನಾಮೆ ನೀಡಿದ್ದೆ. ನನಗೆ ಪಕ್ಷದ ಎಲ್ಲ ಶಾಸಕರ ಬೆಂಬಲವಿದೆ ಎಂದು ಪತ್ರ ನೀಡಿದ್ದರು.

ಆದರೆ ಮೂಲಗಳ ಪ್ರಕಾರ ಪನ್ನೀರ್ ಸೆಲ್ವಂಗೆ 11 ಮಂದಿ ಶಾಸಕರು ಹಾಗೂ ಅಷ್ಟೇ ಸಂಖ್ಯೆಯ ಲೋಕಸಭಾ ಸದಸ್ಯರ ಬೆಂಬಲವಿದೆ ಎನ್ನಲಾಗಿದೆ.   ರಾಜ್ಯದಲ್ಲಿ ಅಮ್ಮನ ಆಸೆಯಂತೆ ಪಕ್ಷವನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗದೆ ಶಾಸಕರು ತಮ್ಮ ನಿರ್ಧಾರವನ್ನು ಬದಲಿಸಬಾರದು. ಪಳನಿಸ್ವಾಮಿಗೆ ನಿಮ್ಮ ನಿಷ್ಠೆ ಇರಲಿ ಎಂದು ಸದ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಶಾಸಕರಿಗೆ ಸೂಚಿಸಿದ್ದರು.   ಹೀಗಾಗಿ ಬಹುತೇಕ ಶಾಸಕರು ಪನ್ನೀರ್ ಸೆಲ್ವಂ ಬದಲಿಗೆ ಪಳನಿ ಸ್ವಾಮಿ ನಾಯಕತ್ವಕ್ಕೆ ಜೈ ಎಂದಿದ್ದಾರೆ. ಮಧ್ಯಾಹ್ನದ ವೇಳೆಗೆ ಶಾಸಕರ ಪತ್ರವುಳ್ಳ ಸಹಿಯನ್ನು ಪರಿಶೀಲಿಸಿ ನಂತರ ಸರ್ಕಾರ ರಚನೆಗೆ ಅವಕಾಶ ನೀಡುವರು.

ತಮಿಳುನಾಡಿನ ವಿಧಾನಸಭೆಯಲ್ಲಿ ಒಟ್ಟು 234 ಮಂದಿ ಸದಸ್ಯರಿದ್ದಾರೆ. ಯಾವುದೇ ಸರ್ಕಾರ ಬಹುಮತ ಸಾಬೀತುಪಡಿಸಲು ಸರಳ ಬಹುಮತವಾಗಿ 118 ಸದಸ್ಯರ ಬೆಂಬಲ ಬೇಕು. ಎಐಎಡಿಎಂಕೆ 135 ಶಾಸಕರನ್ನು ಹೊಂದಿದೆ. ಇದರಲ್ಲಿ ಪನ್ನೀರ್ ಸೆಲ್ವಂ ಗುಂಪಿನಲ್ಲಿ 11 ಮಂದಿ ಶಾಸಕರು ಗುರುತಿಸಿಕೊಂಡಿದ್ದಾರೆ. ಉಳಿದಂತ 124 ಮಂದಿ ಶಾಸಕರು ಪಳನಿಸ್ವಾಮಿ ಗುಂಪಿನಲ್ಲಿದ್ದಾರೆ.   ಸದನದಲ್ಲಿ ಬಹುಮತ ಸಾಧಿಸಲು ರಾಜ್ಯಪಾಲರು ಸೂಚನೆ ಕೊಟ್ಟರೆ ಪಳನಿಸ್ವಾಮಿ ಗೆಲುವಿನ ನಗೆ ಬೀರಬಹುದು. ಸದ್ಯಕ್ಕೆ ತಮಿಳುನಾಡಿನಲ್ಲಿ ಇದೇ ಪರಿಸ್ಥಿತಿ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin