ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕಕ್ಕೆ ಅನುಮೋದನೆ

Jallikattu-Bill

ಚೆನ್ನೈ.ಜ. 23 : ನಿನ್ನೆ ತಮಿಳುನಾಡಿನಾದ್ಯಂತ ನಡೆದ ಜಲ್ಲಿಕಟ್ಟು ನಡೆದ ಬೆನ್ನಲ್ಲೇ ಇಂದು ತಮಿಳುನಾಡಿನ ವಿಧಾನಸಭೆಯಲ್ಲಿ ವಿಶೇಷ ಜಲ್ಲಿಕಟ್ಟು ವಿಧೇಯಕ ಮಂಡನೆಯಾಗಿ ಅನುಮೋದನೆಯೂ ಆಗಿದೆ. ಇದರೊಂದಿಗೆ ಜಲ್ಲಿಕಟ್ಟುಗೆ ತಮಿಳುನಾಡಿನಲ್ಲಿ ಕಾನೂನು ಮಾನ್ಯತೆ ಸಿಕ್ಕಂತಾಗಿದೆ. ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಗೆ ಶನಿವಾರದಂದು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.  ಇಂದು ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪನ್ನೀರ್ ಓ ಸೆಲ್ವಂ ಅವರು ಈ ವಿಧೇಯಕವನ್ನು ಮಂಡನೆ ಮಾಡಿದರು. ಅದಾಗಿ ಕೆಲವೇ ನಿಮಿಷಗಳಲ್ಲಿ ಸಭೆಯು ವಿಧೇಯಕಕ್ಕೆ ಸರ್ವಸಮ್ಮತದ ಒಪ್ಪಿಗೆ ಸೂಚಿಸಿತು.
ಹಿಂಸಾರೂಪ ಪಡೆದ ಪ್ರತಿಭಟನೆ:

ಜಲ್ಲಿಕಟ್ಟು ನಡೆಸಲು ಸುಗ್ರೀವಾಜ್ಞೆಗೆ ಸಮ್ಮತಿ ನೀಡಿದ್ದರೂ, ವಿಶೇಷ ಕಾನೂನು ರೂಪಿಸಬೇಕೆಂದು ಆಗ್ರಹಿಸಿ ತಮಿಳುನಾಡಿನ ವಿವಿಧೆಡೆ ಇಂದು ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ್ದು, ಚೆನ್ನೈ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಅಕ್ಷರಶ: ರಣರಂಗವಾಗಿವೆ. ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿ ಅನೇಕ ವಾಹನಗಳಿಗೂ ಬೆಂಕಿ ಹಚ್ಚಿ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಪೊಲೀಸರು ಪೂರ್ಣ ಪ್ರಮಾಣದ ಲಾಠಿ ಪ್ರಹಾರ ಮತ್ತು ಆಶ್ರುವಾಯು ಸಿಡಿಸಿದ್ದು, ಅನೇಕರು ಗಾಯಗೊಂಡಿದ್ದಾರೆ. ಪ್ರತಿಭಟನೆಯ ಕೇಂದ್ರ ಬಿಂದುವಾದ ಚೆನ್ನೈ ಹೊತ್ತಿ ಉರಿಯುತ್ತಿದೆ. ಗಲಭೈ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ಹರಸಾಹಸ ಪಡೆಬೇಕಾಯಿತು.

ರಾಜಧಾನಿ ಚೆನ್ನೈ, ಮದುರೈ, ಕೊಯಮತ್ತೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ಉಗ್ರಸ್ವರೂಪಕ್ಕೆ ತಿರುಗಿ ಪೊಲೀಸರು ಮತ್ತು ಉದ್ರಿಕ್ತರ ನಡುವೆ ಸಂಘರ್ಷಕ್ಕೆ ನಾಂದಿಯಾಯಿತು. ಚೆನ್ನೈನ ಮರೀನಾ ಬೀಚ್ನಲ್ಲಿ ಬೆಳಿಗ್ಗೆಯಿಂದಲೇ ಶಾಂತಿಯುತ ಧರಣಿ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ತೆರವುಗೊಳಿಸಲು ಪ್ರಯತ್ನಿಸಿದ ನಂತರ ಅದು ಹಿಂಸಾಚಾರರೂಪ ಪಡೆಯಿತು. ಪ್ರತಿಭಟನೆ ಕಾವು ಏರುತ್ತಿದ್ದಂತೆ ಚೆನ್ನೈ ಬಹುತೇಕ ಕಡೆ ಪ್ರತಿಭಟನಕಾರರು ಕಲ್ಲುತೂರಾಟದಲ್ಲಿ ತೊಡಗಿದರು. ಉದ್ರಿಕ್ತ ಗುಂಪೊಂದು ಐಸ್ಹೌಸ್ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿತು. ಠಾಣೆಯ ಆವರಣದಲ್ಲಿ ಬೆಂಕಿ ಹಾಕಿದ ಪರಿಣಾಮ 25ಕ್ಕೂ ಹೆಚ್ಚು ವಾಹನಗಳು ಅಗ್ನಿಗಾಹುತಿಯಾದವು. ಇದೇ ಸಂದರ್ಭದಲ್ಲಿ ಮಹಿಳಾ ಪೊಲೀಸರೂ ಸೇರಿದಂತೆ ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.

ಚೆನ್ನೆಯ ಬಹುತೇಕ ಪ್ರದೇಶಗಳಲ್ಲಿ ಪೊಲೀಸರು ಮತ್ತು ಜನರ ನಡುವೆ ಮಾರಾಮಾರಿ, ಕಲ್ಲು ತೂರಾಟ, ಲಾಠಿ ಪ್ರಹಾರ, ಆಶ್ರುವಾಯು ಸಿಡಿತ-ಈ ದೃಶ್ಯಗಳು ಪರಿಸ್ಥಿತಿಯ ಭೀಕರತೆಗೆ ನಿದರ್ಶನವಾಗಿದ್ದವು. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಜನರು ಪ್ರತಿಭಟನೆಗಿಳಿದು ರಸ್ತೆಯಲ್ಲಿ ಟಯರ್ಗಳಿಗೆ ಬೆಂಕಿ ಹಾಕಿದರು. ಜಲ್ಲಿಕಟ್ಟು ನಡೆಯುವ ಕೇಂದ್ರ ಬಿಂದುವಾದ ಮದುರೈನ ಅಲ್ಲನಂಗೂರಿನಲ್ಲೂ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು. ರಾಜ್ಯದ ಉಳಿದ ಭಾಗಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಚೆನ್ನೈ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಡಿಎಂಕೆ ಖಂಡನೆ :

ವಿದ್ಯಾರ್ಥಿಗಳು ಮತ್ತು ಪ್ರತಿಭಟನಕಾರರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ ಕ್ರಮವನ್ನು ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಖಂಡಿಸಿದ್ದಾರೆ.
ಜಲ್ಲಿಕಟ್ಟು ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಖ್ಯಾತ ನಟ ಕಮಲಹಾಸನ್ ಖಂಡಿಸಿದ್ದಾರೆ. ಜಲ್ಲಿಕಟ್ಟು ನಿರ್ಬಂಧಿಸಲು ಒತ್ತಾಯಿಸುತ್ತಿರುವ ಪೇಟಾ ಸಂಘಟನೆಗೆ ತಾಕತ್ತಿದ್ದರೆ ಅಮೆರಿಕದಲ್ಲಿ ನಡೆಯುವ ಗೂಳಿ ಸವಾರಿ ಸವಾರಿ ಸ್ಫರ್ಧೆಯನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ. ಹಿಂಸಾಚಾರದ ಕಿಚ್ಚು ಹೊತ್ತಿಸಿದ ಮರೀನಾ ಬೀಚ್ : ಇದಕ್ಕೂ ಮೊದಲು ಹೋರಾಟದ ಕೇಂದ್ರ ಬಿಂದುವಾದ ಚೆನ್ನೈನ ಮರೀನಾ ಬೀಚ್ನಲ್ಲಿ ಸಹಸ್ರಾರು ಸಂಖ್ಯೆಯ ಪ್ರತಿಭಟನಾನಿರತರನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ ಕಾರಣ ಹಲವರಿಗೆ ಗಾಯಗಳಾಗಿವೆ. ತಮ್ಮನ್ನು ತೆರವುಗೊಳಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕರ ಬೆದರಿಕೆವೊಡ್ಡಿದ್ದಾರೆ.

ಇದಕ್ಕೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಕಾರಣ ಮರೀನಾ ಬೀಚ್ನಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರನ್ನು ತೆರವುಗೊಳಿಸಲು ಪೊಲೀಸರು ಇಂದು ಬೆಳಗ್ಗಯೇ ಮುಂದಾದರು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಪ್ರತಿರೋಧ ವ್ಯಕ್ತಪಡಿಸಿದರು. ಪೊಲೀಸರ ಬಲಪ್ರಯೋಗವನ್ನು ತಡೆಯಲು ಸಾಮೂಹಿಕ ರಾಷ್ಟ್ರಗೀತೆ ಹಾಡಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಒಗ್ಗಟ್ಟಿನ ಬಲ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಲಾಠಿ ಪ್ರಹಾರ, ನೂಕಾಟ ಮತ್ತು ತಳ್ಳಾಟದಿಂದ ಹಲವರು ಗಾಯಗೊಂಡರು. ಪೊಲೀಸರ ಉದ್ರಿಕ್ತರ್ನ ಚದುರಿಸಲು ಲಾಠಿ ಪ್ರಹಾರ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಸಮುದ್ರದತ್ತ ಓಡಿದ ಗುಂಪು ನೀರಿಗಿಳಿದು ಪ್ರತಿಭಟನೆ ನಡೆಸಿದ್ದೇ ಅಲ್ಲದೇ ನಮ್ಮನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಮರೀನಾ ಬೀಚ್ನಲ್ಲಿ ಇದರಿಂದ ಗೊಂದಲ ಮತ್ತು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು. ಬೀಚ್ಗೆ ಸಂಪರ್ಕ ಕಲ್ಪಿಸುವ ರಾಜಾಜಿ ಮಾರ್ಗದಲ್ಲಿ ಭಾರೀ ಸಂಚಾರ ಒತ್ತಡ ಸೃಷ್ಟಿಯಾಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಬೇರೆ ಮಾರ್ಗಗಳಿಗೆ ಬದಲಿಸಲಾಯಿತು. ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಿದ ನಂತರ ತಮಿಳುನಾಡಿನ ವಿವಿಧೆಡೆ ನಡೆದ ಕ್ರೀಡೆಗಳಲ್ಲಿ ಗೂಳಿ ತಿವಿತದಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin