ತಾಕತ್ತಿದ್ದರೆ ಹೆಸರೇಳ್ರಿ : ಯಡಿಯೂರಪ್ಪಗೆ ಸವಾಲ್ ಹಾಕಿದೆ ಪರಮೇಶ್ವರ್

Parameshwar

ಬೆಂಗಳೂರು, ಡಿ. 26- ತಾಕತ್ತಿದ್ದರೆ ಆರೋಪಿತರ ಹೆಸರೇಳಿರ್ರೀ….ಸುಮ್ಮಸುಮ್ನೆ ಬಾಯಿಗೆ ಬಂದಂತೆ ಮಾತನಾಡಬೇಡ್ರಿ… ಎಂದು ಕೆಪಿಸಿಸಿ ಅಧ್ಯಕ್ಷ, ಗೃಹ ಡಾ.ಜಿ.ಪರಮೇಶ್ವರ್ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರ ಸವಾಲು ಹಾಕಿದ್ದಾರೆ. ಶೇಷಾದ್ರಿಪುರಂನಲ್ಲಿ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಾಗಿ ನೂತನ ಅತಿಥಿಗೃಹ ಕಟ್ಟಡಕ್ಕೆ ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆರೋಪಿತರ ಹೆಸರಿದ್ದರೆ ಬಹಿರಂಗಪಡಿಸಿ. ಸುಮ್ಮನೆ ಮಾತಾಡಬೇಡಿ. ಭ್ರಷ್ಟಾಚಾರದಲ್ಲಿ ಯಾವ್ಯಾವ ಸಚಿವರಿದ್ದಾರೆ ಹೇಳಿ? ಅದನ್ನು ಬಿಟ್ಟು ದಿನಕ್ಕೊಂದು ಹೇಳಿಕೆ ನೀಡುವುದನ್ನು ಕೈಬಿಡಿ ಎಂದು ಹೇಳಿದರು. ಚಿಕ್ಕರಾಯಪ್ಪ ಪ್ರಕರಣದಲ್ಲಿ ಯಾರು, ಯಾರನ್ನು ರಕ್ಷಿಸುತ್ತಿಲ್ಲ. ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಪರಾಧ ಪ್ರಕರಣಗಳು ನಡೆದಿದ್ದವು, ಕಾನೂನು ಸುವ್ಯವಸ್ಥೆ ಹಾಳಾಗಿತ್ತು ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಡಿ.ಜಿ. ಓಂಪ್ರಕಾಶ್ ಅವರನ್ನು ಮುಂದುವರೆಸುವ ವಿಚಾರ ಸಂಬಂಧಿಸಿದಂತ ಪ್ರತಿಕ್ರಿಯಿಸಿದ ಅವರು, ಅವರ ಅಧಿಕಾರಾವಧಿ ಮುಗಿಯುತ್ತಿದೆ. ಈ ಬಗ್ಗೆ ಸರ್ಕಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

19,600 ಮಂದಿ ನೇಮಕ:

ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ 19,600 ಮಂದಿ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು ಮುಂದಿನ 3 ವರ್ಷದವರೆಗೆ ಇದೇ ರೀತಿಯ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಹೇಳಿದರು. ಕಳೆದ ಸರ್ಕಾರದ 5 ವರ್ಷಗಳ ಅವದಿಯಲ್ಲಿ ಪೊಲೀಸ್ ಇಲಾಖೆಗೆ ಯಾವುದೇ ನೇಮಕಾತಿ ಮಾಡಿಕೊಳ್ಳದಿದ್ದರಿಂದ 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದು, ಇರುವ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿತ್ತು ಎಂದು ಹೇಳಿದರು. ಸಿಬ್ಬಂದಿಯ ಒತ್ತಡ ಕಡಿಮೆ ಮಾಡಲು ಹಂತ ಹಂತದ ನೇಮಕಾತಿಯು ಕಳೆದ ಮೂರು ವರ್ಷಗಳಿಂದ ನಡೆದಿದ್ದು, ಮುಂದಿನ ಮೂರು ವರ್ಷಗಳಿಗೆ ನೇಮಕಾತಿ ಸಂಬಂಧ ಹಣಕಾಸು ಇಲಾಖೆ ಅನುಮತಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಕಡಿಮೆಯಾಗಬಹುದು ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಇಲಾಖೆಗೆ ಹಿಂದೆ ಯಾವಾಗಲೂ ನೀಡದಷ್ಟು ಹಣಕಾಸು ನೆರವು ನೀಡಲಾಗಿದ್ದು, ಆಧುನೀಕರಣ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅತ್ಯಾಧುನಿಕ ಉಪಕರಣಗಳ ಜೊತೆಗೆ ದೇಶದಲ್ಲೇ ಮಾದರಿ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದರು.

ಗಸ್ತುವಾಹನ ಹೆಚ್ಚಳ : 

ನಗರದಲ್ಲಿ 580 ಎರ್ಟಿಗಾ ಗಸ್ತುವಾಹನಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ 328 ವಾಹನಗಳನ್ನು ನೀಡಲಾಗಿದೆ. ಸದ್ಯದಲ್ಲೇ 100 ವಾಹನಗಳನ್ನು ನೀಡಲಾಗುತ್ತಿದ್ದು, ಬೇರೆ ಮಹಾನಗರಗಳು ಹಾಗೂ ನಗರಗಳಿಗೆ ತಲಾ 25 ರಂತೆ ಎರ್ಟಿಗಾ ವಾಹನಗಳನ್ನು ನೀಡಲಾಗುವುದು ಎಂದರು. ಕಾರ್ಯಒತ್ತಡದಿಂದ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಇನ್ನು ಹೆಚ್ಚಿನ ಸೌಲಭ್ಯ ನೀಡಬೇಕಾಗಿದ್ದು, ಶೇ. 70ರಷ್ಟು ಮಂದಿ ಇರುವ ಪೊಲೀಸ್ ಪೇದೆಯ ಸಿಬ್ಬಂದಿಗಳಿಗೆ ಉತ್ತಮ ವಸತಿ ಗೃಹ ಹಾಗೂ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಪೊಲೀಸ್ ಇಲಾಖೆಯು ಸಮರ್ಪಕವಾದ ಸೇವೆ ನೀಡುತ್ತಿದ್ದರೂ ಟೀಕೆ ಟಿಪ್ಪಣಿಗಳು ಬರುತ್ತಿವೆ ಅದನ್ನು ಸ್ವಾಗತಿಸುತ್ತೇವೆ. ಆದರೆ, ಅಸಮರ್ಪಕವಾಗಿ ಕೆಲಸ ಮಾಡಿದವರು ಟೀಕೆ ಮಾಡಿರುವುದು ಎಷ್ಟು ಸರಿ ಎಂದು ವಿರೋಧ ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಅಪರಾಧ ಕಡಿಮೆ : 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ನಗರದಲ್ಲಿ ಸರಗಳ್ಳತನಗಳು ಮರೆಯಾಗಿವೆ. ಆದರೆ, ಕೊಲೆ, ಸುಲಿಗೆಗಳಂತಹ ಕೃತ್ಯಗಳು ನಡೆಯುತ್ತಿವೆ. ಅವುಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ನಾವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.  ಪ್ರತಿಪಕ್ಷಗಳವರು ಆಡಳಿತ ನಡೆಸುತ್ತಿದ್ದಾಗ ಕೊಲೆ, ಸುಲಿಗೆಗಳು ನಡೆದಿರಲಿಲ್ಲವೇ? ಸಮಾಜ ಇರುವವರೆಗೆ ಅಪರಾಧ ಕೃತ್ಯಗಳು ನಡೆಯುವುದು ಸಾಮಾನ್ಯ. ಆದರೆ, ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಆದಷ್ಟು ಬೇಗ ಪತ್ತೆ ಹಚ್ಚಿ ಅಪರಾಧಿಗಳನ್ನು ಶಿಕ್ಷಿಸುವುದು ಮುಖ್ಯ ಎಂದು ತಿಳಿಸಿದರು. ಪೊಲೀಸರಿಗೆ ನೀಡುವ 2000 ಭತ್ಯೆ ಜನವರಿಯಿಂದ ಜಾರಿಯಾಗಲಿದೆ. ಪಡಿತರವನ್ನು 400 ರೂ.ಗಳ ನಗದು ರೂಪದಲ್ಲಿ ನೀಡುವುದು, ತನಿಖೆಯಲ್ಲಿ ಪೊಲೀಸರಿಗೆ ನೀಡುವ ಸೌಲಭ್ಯವೂ ಹೆಚ್ಚಲಿದೆ ಎಂದರು.

ನಗರದ ಅಪರಾಧ ಕೃತ್ಯಗಳನ್ನು ಗಮನಿಸಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಪುನರ್ ವಿಂಗಡಣೆ ಮಾಡಲಾಗುವುದು. ಇದರಿಂದ ಪೊಲೀಸ್ ವ್ಯವಸ್ಥೆ ಸುಗಮಗೊಳ್ಳಲಿದೆ ಅಲ್ಲದೆ ಪರಿಣಾಮಕಾರಿ ಕೆಲಸಕ್ಕೂ ಉತ್ತೇಜನ ದೊರೆಯಲಿದೆ ಎಂದು ಹೇಳಿದರು. ಸಂಚಾರ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಲಾಗಿದೆ. ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುವುದು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ವರ್ಷಕ್ಕೆ ಪೊಲೀಸ್ ಇಲಾಖೆಯಲ್ಲಿ ನಾಲ್ಕೂವರೆ ಸಾವಿರ ಮಂದಿ ನಿವೃತ್ತರಾಗಲಿದ್ದು, ಕಳೆದ ಮೂರು ವರ್ಷಗಳ ನೇಮಕಾತಿಯಿಂದ ಪೊಲೀಸ್ ಸಿಬ್ಬಂದಿಯ ಕೊರತೆಯನ್ನು ನಿವಾರಿಸಲಾಗುತ್ತಿದೆ. ಪೊಲೀಸ್ ವಸತಿಗೃಹಗಳ ನಿರ್ಮಾಣ, ಇನ್ನಿತರ ಕ್ರಮಗಳ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.
ವರನಟ ಡಾ. ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ವೇಳೆ ಸರಿಯಾಗಿ ಕಾನೂನು ಸುವ್ಯವಸ್ಥೆ ನಿಭಾಯಿಸಿದ ವಿರೋಧ ಪಕ್ಷಗಳ ಮುಖಂಡರು ನಮ್ಮ ಆಡಳಿತಾವಧಿಯನ್ನು ಕಾನೂನು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವುದು ಎಷ್ಟಪ ಸರಿ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗೃಹ ಕಾರ್ಯದರ್ಶಿ ಸುಭಾಷ್‍ಚಂದ್ರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್, ಡಿಜಿಪಿಗಳಾದ ಕಿಶೋರ್ ಚಂದ್ರ, ಮೇಘರಿಕ್, ಸುನಿಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Sri Raghav

Admin