ತಾಯಿಯ ಕೊಂದು, ಅವಳ ರಕ್ತದಲ್ಲೇ ತನ್ನನ್ನು ಹಿಡಿಯುವಂತೆ ಮೆಸೇಜ್ ಬರೆದು ಪೊಲೀಸ್ ಅಧಿಕಾರಿ ಮಗ ಎಸ್ಕೇಪ್..!
ಮುಂಬೈ, ಮೇ 25- ತನ್ನ ತಾಯಿಯನ್ನೇ ಕತ್ತು ಕೊಯ್ದು ಹತ್ಯೆ ಮಾಡಿದ ಮಗನೊಬ್ಬ ಮೃತ ದೇಹದ ಪಕ್ಕದಲ್ಲೇ ಅವಳ ರಕ್ತದಿಂದ ಸಂದೇಶವೊಂದನ್ನು ಬರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಹತ್ಯೆ ಮಾಡಿರುವ ವ್ಯಕ್ತಿ ಬೇರಾರೂ ಅಲ್ಲ, ಒಂದು ಕಾಲಕ್ಕೆ ದೇಶಾದ್ಯಂತ ಸಂಚಲನ ಉಂಟುಮಾಡಿದ್ದ ಶೀನಾಬೋರಾ ಹತ್ಯೆ ಪ್ರಕರಣದ ತನಿಖೆಯ ಪ್ರಮುಖ ಅಧಿಕಾರಿ ಜ್ಞಾನೇಶ್ವರ್ ಗನೋರ್ ಎಂಬುವರ ಪುತ್ರ ಸಿದ್ಧಾಂತ್. ಇನ್ಸ್ಪೆಕ್ಟರ್ ಜ್ಞಾನೇಶ್ವರ್ ಅವರು ಕರ್ತವ್ಯದ ಮೇಲೆ ತೆರಳಿದ್ದಾಗ ಮಗ ಈ ಕೃತ್ಯ ಎಸಗಿದ್ದಾನೆ. ತಾಯಿಯ ರಕ್ತದಿಂದಲೇ ಸಾಧ್ಯವಾದರೆ ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂಬ ಸಂದೇಶ ಬರೆದು ನಾಪತ್ತೆಯಾಗಿದ್ದಾನೆ.
ಮಧ್ಯಾಹ್ನ ಕರ್ತವ್ಯ ಮುಗಿಸಿ ಮನೆಗೆ ಬಂದ ಇನ್ಸ್ಪೆಕ್ಟರ್ ಜ್ಞಾನೇಶ್ವರ್ ಅವರು ಮನೆಗೆ ಬೀಗ ಹಾಕಿದ್ದನ್ನು ಕಂಡು ತಾಯಿ-ಮಗ ಎಲ್ಲೋ ಹೊರಗಡೆ ಹೋಗಿರಬಹುದು ಎಂದು ಬಹಳ ಹೊತ್ತು ಕಾದಿದ್ದಾರೆ. ನಂತರ ಬಾಗಿಲ ಬಳಿ ಇದ್ದ ಡಸ್ಟ್ಬಿನ್ನಲ್ಲಿ ಕೀ ಬಂಚ್ ಕಂಡಿದೆ. ಅದನ್ನು ತೆಗೆದುಕೊಂಡು ಬಾಗಿಲು ತೆರೆದು ಒಳಹೋಗಿ ನೋಡಿದ ಜ್ಞಾನೇಶ್ವರ್ ಆ ಭೀಕರ ದೃಶ್ಯ ಕಂಡು ದಿಗ್ಭ್ರಮೆಗೊಳಗಾದರು.
ನಂತರ ಸಂದೇಶ ನೋಡಿದಾಗ ತಮ್ಮ ಮಗನೇ ಈ ಕೃತ್ಯ ಎಸಗಿದ್ದಾನೆಂದು ತಿಳಿಯಿತು. ಕೂಡಲೆ ಕಂಟ್ರೋಲ್ ರೂಂಗೆ ಕರೆ ಮಾಡಿದ ಜ್ಞಾನೇಶ್ವರ್ ಪೊಲೀಸರು ಬಂದ ತಕ್ಷಣ ಅವರಿಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈನ ಸಾಂತಾಕ್ರೂಸ್ ಠಾಣೆ ಪೊಲೀಸರು ಹಂತಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸಿದ್ಧಾಂತ್ಗೆ ಇತ್ತೀಚೆಗೆ ತಾಯಿ ದೀಪಾಲಿ ಬುದ್ಧಿವಾದ ಹೇಳಿದ್ದರು. ಪಾಕೆಟ್ ಮನಿ ಕೊಡುವುದನ್ನೂ ನಿಲ್ಲಿಸಿದ್ದರು. ಈ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >