ತಾಯ್ನೆಲದ ಪ್ರಗತಿಯಲ್ಲಿ ನಿಮ್ಮ ಪಾಲು ಇರಲಿ : ಅಕ್ಕ ಸಮ್ಮೇಳನದಲ್ಲಿ ಉಮಾಶ್ರೀ ಕರೆ

UMASHRI

ನ್ಯೂಜೆರ್ಸಿ, ಸೆ.7- ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಶಕ್ತಿಗೆ ಅನುಗುಣವಾಗಿ ಕರ್ನಾಟಕದ ಪ್ರಗತಿಗೆ ಕಾಣಿಕೆ ಸಲ್ಲಿಸುವಂತಾಗಲಿ. ತಮ್ಮ ತಾಯ್ನೆಲದ ಪ್ರಗತಿಗಾಗಿ ಅಮೆರಿಕಾ ಕನ್ನಡಿಗರು ಹುಟ್ಟೂರಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಈಡೇರಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ  ಸಚಿವೆ ಉಮಾಶ್ರೀ ಕರೆ ನೀಡಿದ್ದಾರೆ.ಅಮೆರಿಕದ ನ್ಯೂಜೆರ್ಸಿಯಲ್ಲಿ ಆರಂಭವಾದ 9ನೇ ವಿಶ್ವ ಅಕ್ಕ ಸಮ್ಮೇಳನದ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಸಾವಿರಾರು ಮೈಲಿಗಳ ದೂರದಲ್ಲಿ ಸಪ್ತ ಸಾಗರದಾಚೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಿರುವುದು ನೋಡಿ ನನಗೆ ರೋಮಾಂಚನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇದೆ. ಇಂತಹ ಶ್ರೀಮಂತ ಚರಿತ್ರೆ ಇರುವ ಕನ್ನಡ ವೈವಿಧ್ಯತೆಗೆ ಹೆಸರಾದ ನಾಡು. ಇಲ್ಲಿನ ಪ್ರಾಕೃತಿಕ ಶ್ರೀಮಂತಿಕೆ, ಜಾನಪದದ ವೈಭವ, ಸಾಹಿತ್ಯದ ಅನನ್ಯತೆ ಬೇರಾವುದೇ ಭಾಷೆಗೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕದ ಉದ್ದಗಲಕ್ಕೂ ಜಿಲ್ಲೆಗೊಂದು ಭಾಷಾ ವೈವಿಧ್ಯತೆ, ಜಾನಪದ ಕಲಾ ವೈವಿಧ್ಯತೆ, ಆಚರಣೆ, ಸಂಸ್ಕೃತಿ  ಎಲ್ಲವೂ ಅತ್ಯಂತ ವಿಶಿಷ್ಟವಾದದ್ದು. ಇಂತಹ ಕನ್ನಡದ ನೆಲದಲ್ಲಿ ಹುಟ್ಟಿ ಇಂದು ಇಷ್ಟು ದೂರದ ಅಮೆರಿಕದಲ್ಲಿ ನೀವು ನೆಲೆಸಿ, ಇಲ್ಲಿಯೂ ತಮ್ಮ ನೆಲದ ಸಂಸ್ಕೃತಿ ಯನ್ನು ಸ್ಮರಿಸುವಂತಹ ಕೆಲಸವನ್ನು ಮಾಡುತ್ತಿದ್ದೀರಿ. ನಾನಾ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ ನೀವು ಕರ್ನಾಟಕದ ಬಗೆಗಿನ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳಬೇಕೆಂಬುದು ನನ್ನ ಆಶಯ.

ಇಲ್ಲಿರುವ ಉದ್ಯಮಿಗಳು ಕರ್ನಾಟಕದಲ್ಲಿಯೂ ಬಂಡವಾಳ ಹೂಡಿ, ಕರ್ನಾಟಕದ ಪ್ರಗತಿಗೂ ಕಾರಣರಾಗಿ. ಬೇರೆಯವರಿಗೆ ಸಹಾಯ ಮಾಡಲು ಶಕ್ತಿ ಇರುವವರು ಕರ್ನಾಟಕದಲ್ಲಿ ತಾವು ಹುಟ್ಟಿದ ನಗರ, ಗ್ರಾಮಗಳಲ್ಲಿ ಸಣ್ಣ ಮಟ್ಟದ್ದಾದರೂ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ.  ಕುಡಿಯುವ ನೀರು ಪೂರೈಕೆ ಗಿರಬಹುದು. ಶೌಚಾಲಯ ನಿರ್ಮಾಣ ಅಥವಾ ಮಾದರಿ ಗ್ರಾಮ ನಿರ್ಮಾಣ ಯಾವುದಾದರೂ ಒಂದು ರೀತಿಯಲ್ಲಿ ನೀವು ತಾಯ್ನೆಲದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಅವರು ಕಿವಿಮಾತು ಹೇಳಿದರು.

► Follow us on –  Facebook / Twitter  / Google+

Sri Raghav

Admin