ತಾಳಿ ಕೊಳ್ಳಲು ಬಂದು ಚಿನ್ನದಂಗಡಿಯನ್ನೇ ದೋಚಿದರು ..!

shgdfahdfhಬೆಂಗಳೂರು,ಆ.5- ಬೆಳ್ಳಂಬೆಳಗ್ಗೆ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಯೊಂದಕ್ಕೆ ನುಗ್ಗಿದ ಮೂವರು ದರೋಡೆ ಕೋರರು, ನೌಕರನ ಮೇಲೆ ಹಲ್ಲೆ ಮಾಡಿ ಸೀಮೆಎಣ್ಣೆ ಸುರಿದು ಬೆದರಿಸಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಭರಣಗಳಿದ್ದ ಆರು ಬಾಕ್ಸ್‍ಗಳನ್ನು  ದೋಚಿ ಸಿನಿಮೀಯ ರೀತಿ ಪರಾರಿಯಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ದ್ವಾರಕಾನಗರದಲ್ಲಿ ನಡೆದಿದೆ.  ನಗರದ ಬಾಗಲೂರು ಕ್ರಾಸ್‍ನಲ್ಲಿರುವ ರಾಜಲಕ್ಷ್ಮಿ ಜ್ಯುವೆಲರ್ಸ್ ಅಂಗಡಿಯಲ್ಲಿ ಈ ದರೋಡೆ ನಡೆದಿದ್ದು,  ಯಲಹಂಕ ಹಾಗೂ ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿಬೀಳಿಸಿದೆ.   ಮಾಲೀಕ ಗೋವಿಂದ್ ಸಿಂಗ್‍ಗೆ ಸೇರಿದ ರಾಜಲಕ್ಷ್ಮಿ ಜ್ಯುವೆಲರ್ಸ್ ಅಂಗಡಿಯಲ್ಲಿ ಇಬ್ಬರು ನೌಕರರು ಕೆಲಸ ಮಾಡುತ್ತಿದ್ದು ,  ಒಬ್ಬ ನೌಕರ ಗೋಪಾಲ್ ಎಂಬಾತ ರಾತ್ರಿ ವೇಳೆ ಅಂಗಡಿಯಲ್ಲೇ ಮಲಗಿ ಬೆಳಗ್ಗೆ ಎದ್ದು ಮಾಲೀಕನ ಮನೆಗೆ ಹೋಗಿ ತಿಂಡಿ ಮುಗಿಸಿಕೊಂಡು ಬಂದು ಅಂಗಡಿಯ ಕೀ ತೆಗೆಯುವುದು ಈತನ ನಿತ್ಯ ಕೆಲಸ.


ಅದರಂತೆ ಇಂದು ಬೆಳಗ್ಗೆ 7.15ರಲ್ಲಿ ನೌಕರ ಗೋಪಾಲ್ ಅಂಗಡಿಗೆ ಬಂದು ಬಾಗಿಲು ತೆರೆದಿದ್ದಾರೆ. ‘

ಈ ವೇಳೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ದರೋಡೆಕೋರರು ಮಾಂಗಲ್ಯ-ಗುಂಡು ತೋರಿಸುವಂತೆ ಕೇಳಿದ್ದಾರೆ. ನೌಕರ ಗೋಪಾಲ್ ತಿಜೋರಿಯಲ್ಲಿದ್ದ ಮಾಂಗಲ್ಯ ತರಲು ಹೋಗುತ್ತಿದ್ದಂತೆ ಈ ಮೂವರು ಆತನ ಮೇಲೆ ಹಲ್ಲೆ ನಡೆಸಿದಾಗ  ಕೆಳಗೆ ಬಿದ್ದಿದ್ದಾನೆ.   ಈ ಸಂದರ್ಭದಲ್ಲಿ ಅಂಗಡಿಯಲ್ಲಿ  ಈ ದರೋಡೆಕೋರರು ಸೀಮೆಎಣ್ಣೆ ಸುರಿದು ನೀನು ಕಿರುಚಿಕೊಂಡರೆ ಬೆಂಕಿ ಹಚ್ಚುವುದಾಗಿ ಬೆದರಿಸಿ ಅಲ್ಲಿದ್ದ ಸಿಸಿಟಿವಿಯ ಪುಟೇಜ್‍ನ್ನು ಕಿತ್ತುಕೊಂಡು ನಂತರ ಕೋಟ್ಯಂತರ ಬೆಲೆಯ ಆಭರಣಗಳಿದ್ದ ಆರು ಬಾಕ್ಸ್‍ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ‘

ತಕ್ಷಣ ಗೋಪಾಲ್ ದೂರವಾಣಿ ಕರೆ ಮಾಡಿ ಅಂಗಡಿ ಮಾಲೀಕ ಗೋವಿಂದ್ ಸಿಂಗ್ ಅವರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಅಂಗಡಿಗೆ ಬಂದು ತಕ್ಷಣ ಬಾಗಲೂರು ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.   ದರೋಡೆಕೋರರು ಅಂಗಡಿ ನೌಕರನನ್ನು ಬೆದರಿಸಲು ಹಾಗೂ ಯಾವುದೇ ಸುಳಿವು ಸಿಗದಂತೆ ಸೀಮೆಎಣ್ಣೆ ಸುರಿದಿರುವುದು ಗಮನಿಸಿದರೆ ವೃತ್ತಿಪರ ದರೋಡೆಕೋರರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಈ ಕೃತ್ಯ ನಡೆಯುವಾಗ ಹೊರಗಡೆ ಈ ಅಂಗಡಿಗೆ ಯಾರೂ ಬರದಂತೆ ಹೆಲ್ಮೆಟ್ ಧರಿಸಿಕೊಂಡು ಬೈಕ್‍ನಲ್ಲೇ ದರೋಡೆಕೋರನೊಬ್ಬ ಕಾವಲು ಕಾಯುತ್ತ ನಿಂತಿದ್ದನು ಎಂದು ಹೇಳಲಾಗಿದೆ.  ಈ ದರೋಡೆ ಬೆಳ್ಳಂಬೆಳಗ್ಗೆ  7.15ರಿಂದ 7.45ರ ಮಧ್ಯೆ ಅಂದರೆ ಕೇವಲ 30 ನಿಮಿಷದಲ್ಲಿ  ನಡೆಸಿರುವುದು ಗಮನಿಸಿದರೆ ಜನದಟ್ಟಣೆ ಹೆಚ್ಚಾಗುವುದರೊಳಗೆ ಈ ದರೋಡೆಕೋರರು ಯಾರಿಗೂ ಅನುಮಾನ ಬಾರದಂತೆ ಸಿನಿಮೀಯ ರೀತಿಯಲ್ಲಿ  ದರೋಡೆ ನಡೆಸಿ ಪರಾರಿಯಾಗಿದ್ದಾರೆ.  ಸ್ಥಳಕ್ಕಾಗಮಿಸಿದ ಬಾಗಲೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.   ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಸುತ್ತಮುತ್ತಲ ನಿವಾಸಿಗಳು ಅಂಗಡಿ ಮುಂದೆ ಜಮಾಯಿಸಿ ಆತಂಕ ವ್ಯಕ್ತಪಡಿಸಿದರು.  ದರೋಡೆಕೋರರು ಅಪಹರಿಸಿರುವ ಚಿನ್ನಾಭರಣಗಳ ನಿಖರವಾದ ಮೌಲ್ಯ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.  ಅಂಗಡಿಯಲ್ಲಿರುವ ಆಭರಣ, ದರೋಡೆಯಾಗಿರುವ ಆಭರಣದ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್

Sri Raghav

Admin