ತುಮಕೂರಿನಲ್ಲಿ ಡೇಂಘಿ ಹಾವಳಿ : ಡಿ ಗ್ರೂಪ್ ನೌಕರ ಬಲಿ
ತುಮಕೂರು, ಆ.16- ಜಿಲ್ಲೆಯಾದ್ಯಂತ ಡೇಂಘಿ ಹರಡಿದ್ದು, ಡಿ ಗ್ರೂಪ್ ನೌಕರನೊಬ್ಬ ಜ್ವರಕ್ಕೆ ಬಲಿಯಾಗಿರುವುದರಿಂದ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದ ಝಾಗೀರ್ ಮೃತಪಟ್ಟ ದುರ್ದೈವಿ. ಈತ ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಜಿಲ್ಲಾಸ್ಪತ್ರೆಗೆ ದಾಖಲಾದ ವೇಳೆ ರಕ್ತ ಪರೀಕ್ಷಿಸಿದಾಗ ಡೇಂಘಿ ಇರುವುದು ತಿಳಿದು ಬಂದಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
240ಮಂದಿಗೆ ಡೇಂಘಿ ಶಂಕೆ:
ಜಿಲ್ಲೆಯಲ್ಲಿ 240 ಮಂದಿಗೆ ಡೇಂಘಿ ಇರುವ ಶಂಕೆ ವ್ಯಕ್ತವಾಗಿದ್ದು ರಕ್ತ ಪರೀಕ್ಷಿಸಲಾಗಿದೆ. ಇದುವರೆಗೆ 29 ಮಂದಿಗೆ ಡೇಂಘಿ ಇರುವುದು ದೃಢಪಟ್ಟಿದೆ. ತುಮಕೂರು ನಗರದಲ್ಲಿ 16, ಕೊರಟಗೆರೆಯಲ್ಲಿ 2, ಶಿರಾ 1, ಗುಬ್ಬಿ 3, ತಿಪಟೂರು 2, ಚಿಕ್ಕನಾಯಕನಹಳ್ಳಿ 4, ತುರುವೇಕೆರೆಯಲ್ಲಿ ಒಬ್ಬರಿಗೆ ಡೇಂಘಿ ಇರುವುದು ದೃಢಪಡ್ಡಿದೆ.
ಇವರೆಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯಲ್ಲಿ ಡೇಂಘಿ ಹೆಚ್ಚಾಗುತ್ತಿರುವುದರಿಂದ ಜನತೆ ಮುಂಜಾಗರುತೆ ವಹಿಸಬೇಕು, ಸ್ವಚ್ಛತೆ ಕಾಪಾಡಬೇಕು, ಜ್ವರ ಬಂದ ಕೂಡಲೇ ವೈದ್ಯರಲ್ಲಿ ರಕ್ತ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.