ತೆರೆಯ ಮೇಲೆ ‘ದಂಡುಪಾಳ್ಯ- 3’ ನೇ ಭಾಗ

dandupalya-3-2
ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿದಂತಹ ಕೃತ್ಯ ಮಾಡಿದ ತಂಡವೇ ದಂಡುಪಾಳ್ಯ ಗ್ಯಾಂಗ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಂಡುಪಾಳ್ಯ ಪಾರ್ಟ್- 1 ಬಿಡುಗಡೆಯಾಗಿತ್ತು. ತದನಂತರ ದಂಡುಪಾಳ್ಯ ಪದ ಬಳಸಬಾರದು ಎಂಬ ವಿಚಾರ ಹೊರಬರುತ್ತಿದ್ದಂತೆ ಪಾರ್ಟ್-2 ಎಂಬ ಶೀರ್ಷಿಕೆಯಡಿ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಪಾರ್ಟ್-3 ಹೊರಬರುತ್ತಿದ್ದು, ಇದರ ಮೂಲಕ ದಂಡುಪಾಳ್ಯ ಗ್ಯಾಂಗ್ ವ್ಯಕ್ತಿಗಳ ಕೃತ್ಯದ ಸೂಕ್ಷ್ಮ ವಿಚಾರಗಳನ್ನು ತೆರೆ ಮೇಲೆ ತರಲು ಸಿದ್ಧರಾಗಿದ್ದಾರಂತೆ.  ಈ ಚಿತ್ರ ಎಸ್‍ಆರ್‍ಟಿ ಎಂಟರ್‍ಟೈನರ್ ಬ್ಯಾನರ್ ಅಡಿಯಲ್ಲಿ ಬೆಳ್ಳಿ ಪರದೆ ಮೇಲೆ ಬರುತ್ತಿದೆ. ಈ ಹಿಂದೆ ದಂಡುಪಾಳ್ಯ, ದಂಡುಪಾಳ್ಯ 2 ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಅವರೇ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ನವೀನ್‍ಕೃಷ್ಣ, ಗುರುರಾಜ ದೇಸಾಯಿ, ರಮೇಶ್ ಹಾಗೂ ತಬಲಾನಾಣಿ ಸಂಭಾಷಣೆ ರಚಿಸಿದ್ದಾರೆ.

ದಂಡುಪಾಳ್ಯ-2 ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲಿ ಉಳಿಸಿಕೊಂಡಿದ್ದ ಒಂದಷ್ಟು ಕನ್‍ಫ್ಯೂಷನ್‍ಗಳಿಗೆ ಈ ಚಿತ್ರದ ಮೂಲಕ ಉತ್ತರ ಸಿಗಲಿದೆ.  ರಾಮ್ ತಳ್ಳೂರಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಶ್ರೀನಿವಾಸ ರಾಜು ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಪೂಜಾಗಾಂಧಿ, ರವಿಶಂಕರ್, ರವಿಕಾಳೆ, ನಕುಲ್ ದೇಶಪಾಂಡೆ, ಕರಿಸುಬ್ಬು, ಪೆಟ್ರೋಲ್ ಪ್ರಸನ್ನ ಸೇರಿದಂತೆ ದಂಡುಪಾಳ್ಯ-2 ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.  ಈ ಚಿತ್ರದ ಮೂಲಕ ಈ ಹಿಂದೆ ಇದ್ದಂತಹ ಚಿತ್ರದ ಎಲ್ಲ ಗೊಂದಲಕ್ಕೆ ತೆರೆ ಎಳೆಯಲಿದೆ ಚಿತ್ರತಂಡ ಎಂಬ ಮಾತುಗಳು ಕೇಳಿಬರುತ್ತಿವೆ.  ಕ್ರೌರ್ಯ ಮೆರೆದಂತಹ ಈ ಪಾಪಿಗಳ ಚಿತ್ರಣ ಯಾವ ಪರಿಯಾಗಿ ಬೆಳ್ಳಿ  ಪರದೆ ಮೇಲೆ ಬರಲಿದೆಯೋ ನೋಡಬೇಕು.

Sri Raghav

Admin