ತೆಲಾಂಗಣ ಸಲ್ಲಿಸಿದ್ದ ರಿಟ್ ಅರ್ಜಿ ವಜಾ ಮಾಡಿರುವುದರಿಂದ ನಮ್ಮ ಪಾಲಿನ ನೀರಿನ ಬಳಕೆಗೆ ಅಡೆತಡೆಗಳಿಲ್ಲ

tb--chandraಚಿತ್ರದುರ್ಗ, ಅ.25- ರಾಜ್ಯಗಳ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತೆಲಾಂಗಣ ರಾಜ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿರುವುದರಿಂದ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಅಡೆತಡೆಗಳಿಲ್ಲ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಹೊಸದುರ್ಗ ತಾಲ್ಲೂಕಿನ ಜಾನಕಲ್ ಸಮೀಪ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಕಾಲುವೆಯ 3.28 ಕಿ.ಮೀ.ಸುರಂಗ ಮಾರ್ಗ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ಸುಪ್ರೀಂ ಕೋರ್ಟ್ ನೀಡಿರುವ ಆದೇಶದನ್ವಯ ರಾಜ್ಯದಲ್ಲಿನ ಯಾವುದೇ ನೀರಾವರಿ ಯೋಜನೆಗಳಿಗೆ ತಡೆ ಇಲ್ಲವಾಗಿದ್ದು ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ 29.9 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು 12343 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡುತ್ತಿದ್ದು ಇದೊಂದು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲಾಗಿದೆ. ಕೇಂದ್ರವು ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಬೇಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಭದ್ರಾ ರಾಷ್ಟ್ರೀಯ ಯೋಜನೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಕಾಲುವೆಯ ಜಾನಕಲ್ ಸಮೀಪ 3.28 ಕಿ.ಮೀ.ಸುರಂಗ ಮಾರ್ಗದ ಕಾಮಗಾರಿಗೆ 72 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇದು ಪ್ರಮುಖ ಕಾಮಗಾರಿಯಾಗಿದ್ದು ಇದರಿಂದ ಗುಡ್ಡಗಳನ್ನು ದಾಟಿ ಹಿರಿಯೂರು ತಾಲ್ಲೂಕಿಗೆ ಭದ್ರಾ ನೀರು ಬರುತ್ತದೆ. ಈ ಕಾಮಗಾರಿ ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು ವರ್ಷದಲ್ಲಿ ಹಿರಿಯೂರು ತಾಲ್ಲೂಕಿಗೆ ಭದ್ರಾ ನೀರು ಬರಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಸೇರ್ಪಡೆಯಾಗಿದ್ದು ಹೊಳಲ್ಕೆರೆ ತಾಲ್ಲೂಕು ಇದರ ವ್ಯಾಪ್ತಿಗೆ ಒಳಪಟ್ಟಿದೆ. ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಚಿಕ್ಕಯಗಟಿ ಬಳಿಯಿಂದ ಹೊಳಲ್ಕೆರೆಗೆ ಭದ್ರಾ ನೀರನ್ನು ಕೊಡಲಾಗುತ್ತದೆ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರಾದ ಡಿ.ಸುಧಾಕರ್, ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ  ಪ್ರಕಾಶ್‍ಮೂರ್ತಿ, ನಾಗೇಂದ್ರನಾಯ್ಕ್, ಜಿ.ಪಂ.ಸದಸ್ಯರಾದಅನಂತ್, ವಿಶಾಲಾಕ್ಷಿ ನಟರಾಜ್, ವಿಜಯಲಕ್ಷ್ಮಿ, ಅಜ್ಜಪ್ಪ ಜಿ.ಟಿ, ಮಮತಾ ಕುಮಾರಸ್ವಾಮಿ, ತಾ.ಪಂ.ಅಧ್ಯಕ್ಷೆ ಶಾಂತಲಾ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin