ತೊಪ್ಪನಹಳ್ಳಿ ಜೋಡಿ ಜೆಡಿಎಸ್ ಕಾರ್ಯಕರ್ತರ ಹತ್ಯೆ ಪ್ರಕರಣ : ಪಿಎಸ್ಐ, ಓರ್ವ ಪೇದೆ ಅಮಾನತು
ಮಂಡ್ಯ,ಡಿ.29-ಮದ್ದೂರು ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಡಿ.25 ರಂದು ನಡೆದ ಇಬ್ಬರು ಜೆಡಿಎಸ್ ಕಾರ್ಯಕರ್ತರು ಹತ್ಯೆ ಪ್ರಕರಣ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ವಿಫಲರಾದ ಆರೋಪ ಹಿನ್ನಲೆಯಲ್ಲಿ ಮದ್ದೂರು ಠಾಣೆ ಪಿಎಸ್ಐ, ಓರ್ವ ಪೇದೆಯನ್ನು ಐಜಿಪಿ ಬಿ.ಕೆ.ಸಿಂಗ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೋಹನ್ ಜಿ.ಪಟೇಲ್ ಹಾಗೂ ಪೇದೆ ಸಿದ್ದರಾಜು ಅಮಾನತು ಆದ ಪೊಲೀಸ್ ಅಧಿಕಾರಿಗಳು. ಫ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಜೆಡಿಎಸ್ ಬೆಂಬಲಿಗರಾದ ನಂದೀಶ್ ಹಾಗೂ ಮುತ್ತರಾಜ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಚಾಕುನಿಂದ ಇರಿದು ಕೊಲೆ ಮಾಡಲಾಗಿತ್ತು.
ಈ ಸಂಬಂಧ ಮದ್ದೂರು ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಈ ಹಿಂದೆ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಗ್ರಾಮಸ್ಥರು ಠಾಣೆಗೆ 3 ಬಾರಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ . ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪಿಎಸ್ಐ ಹಾಗೂ ಪೇದೆ ವಿಫಲವಾಗಿರುವ ಆರೋಪ ಕೇಳಿಬಂದಿದ್ದ ರಿಂದ ಅವರನ್ನು ಐಜಿಪಿ ಅಮಾನತು ಮಾಡಿದ್ದಾರೆ.