ತೋಟಕ್ಕೆ ಹೋಗುತ್ತಿದ್ದ ಯುವಕನ ಮೇಲೆ ಕರಡಿಗಳ ದಾಳಿ
ತುಮಕೂರು,ಫೆ.16-ತೋಟಕ್ಕೆ ಹೋಗುತ್ತಿದ್ದ ಯುವಕನ ಮೇಲೆ ಏಕಾಏಕಿ ಎರಡು ಕರಡಿಗಳು ದಾಳಿ ಮಾಡಿ ಗಂಭೀರ ಗಾಯ ಮಾಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ದೇವಲಕೆರೆ ಬಳಿ ಇಂದು ಬೆಳಗ್ಗೆ ತೋಟಕ್ಕೆ ಹೋಗುತ್ತಿದ್ದ ರಾಜ್ಕುಮಾರ್(25) ಎಂಬಾತನ ಮೇಲೆ ಎರಡು ಕರಡಿಗಳು ಮೈಮೇಲೆರಗಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದಾಗ ಬೆಂಬಿಡದೆ ಎರಡು ಕರಡಿಗಳು ಈತನ ಮೇಲೆ ಹಾರಿ ಕೆಳಗೆ ಬೀಳಿಸಿಕೊಂಡು ಬೆನ್ನು ಹಾಗೂ ತಲೆಗೆ ಪರಚಿರುವುದರಿಂದ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ವನ್ಯಮೃಗಗಳ ಹಾವಳಿ ಹೆಚ್ಚಾಗಿದ್ದು , ಆನೆಗಳು, ಕರಡಿಗಳು ಗ್ರಾಮಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದಲ್ಲದೆ ಗ್ರಾಮಸ್ಥರ ಮೇಲೆ ಎರಗುತ್ತಿರುವುದರಿಂದ ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >