ತೋಟಗಾರಿಕಾ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಶಾಸಕ ಸೂಚನೆ

devanahalli

ದೇವನಹಳ್ಳಿ,ಆ.20- ತೋಟಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳು ನೇರವಾಗಿ ತಲುಪಿಸಬೇಕು, ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು ತೋಟಗಾರಿಕೆ ಇಲಾಖೆಯಲ್ಲಿ ಹಿಂದಿನ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಹೋಗಬೇಕು, ರೈತರಿಗೆ ನೇರವಾಗಿ ಸೌಲಭ್ಯಗಳು ದೊರೆಯುವಂತಾಗಬೇಕು. ಹಳೆ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು. ರೇಷ್ಮೆ ಇಲಾಖೆಯ ಎಲ್ಲಾ ಜಾಗಗಳನ್ನು ಉಳಿಸಿ ಅವುಗಳಿಗೆ ತಡೆಗೋಡೆ ನಿರ್ಮಾಣವಾಗಬೇಕು. ಸರ್ಕಾರಿ ಜಾಗ ಉಳಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನಲ್ಲಿ ಪಶುಸಂಗೋಪನೆ ಇಲಾಖೆಯು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ, ಒಂದು ವಾರದೊಳಗೆ ಎಲ್ಲಾ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಿ, ಸರಿ ಇಲ್ಲದ ಅಧಿಕಾರಿಗಳು ಕೂಡಲೇ ತಾಲೂಕು ಬಿಟ್ಟು ಹೋಗಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ರೇಷ್ಮೆ ಇಲಾಖೆಯ ಒಂದು ಎಕರೆ 38ಗುಂಟೆ ಜಾಗವಿದ್ದು, ಹೈಟೆಕ್ ಬಿಎಂಟಿಸಿ ಬಸ್ ನಿಲ್ದಾಣವಾದರೆ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ಮಿನಿವಿಧಾನಸೌಧವು ಸಹ ಪಕ್ಕದಲ್ಲಿರುವುದರಿಂದ ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹೆಚ್ಚಿನ ಮಾಹಿತಿಯನ್ನು ನೀಡಬೇಕು. ಎಂದು ಹೇಳಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎನ್. ಮಂಜುಳ, ರೇಷ್ಮೆ ಇಲಾಖೆಯ ಅಧಿಕಾರಿ ಪ್ರಭಾಕರ್, ತಾಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷೆ ನಂದಿನಿ ವೆಂಕಟೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ ಮೂರ್ತಿ, ಬಿಇಒ ಮುನಿರಾಜು, ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Sri Raghav

Admin