ದಸರಾಗೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಮೈಸೂರು

Spread the love

Mysuru--01

ಮೈಸೂರು, ಸೆ.14-ದಸರೆಯ ಆಕರ್ಷಕ ಕೇಂದ್ರಬಿಂದುವಾಗಿರುವ ಅರಮನೆ ನೋಡುಗರನ್ನು ಆಕರ್ಷಿಸಲು ಸುಣ್ಣಬಣ್ಣ ಬಳಿಯುವ ಕಾರ್ಯಭರದಿಂದ ಸಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ಅರಮನೆಯನ್ನು ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗುತ್ತಿದ್ದು , ಈಗಾಗಲೇ ಕಾರ್ಮಿಕರು ಬಣ್ಣ ಲೇಪನ ಕಾರ್ಯದಲ್ಲಿ ನಿರತರಾಗಿದ್ದರು. ಈ ಬೃಹತ್ ಅರಮನೆಗೆ ವರ್ಣರಂಜಿತ ವಿವಿಧ ಬಣ್ಣಗಳನ್ನು ಲೇಪಿಸುತ್ತಿದ್ದು , ನೋಡಲು ಸುಂದರವಾಗಿ ಕಾಣುತ್ತಿದೆ.  ಈ ಬಾರಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅರಮನೆಯ ವರ್ಣರಂಜಿತ ದೀಪಾಲಂಕಾರದ ಅವಧಿಯನ್ನು ವಿಸ್ತರಿಸಲಾಗಿದ್ದು, ಆಧುನಿಕೃತ ಎಲ್‍ಇಡಿ ಬಲ್ಪ್‍ಗಳನ್ನು ಅರಮನೆಗೆ ಅಳವಡಿಸಲಾಗುತ್ತಿದೆ.

Mysuru--02

ಸೆ.21ರಿಂದ ಆರಂಭವಾಗುವ ದಸರಾದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳು ಮುಗಿಯುವವರೆಗೂ ಅರಮನೆಯ ದೀಪಾಲಂಕಾರ ಝಗಮಗಿಸಲಿವೆ.  ಸಂಜೆ 6.30ರಿಂದ ರಾತ್ರಿ 10 ಗಂಟೆವರೆಗೂ ಬಣ್ಣ ಬಣ್ಣದ ವರ್ಣರಂಜಿತ ದೀಪಗಳು ಅರಮನೆಯ ಸೊಬಗನ್ನು ರಾರಾಜಿಸಲಿದ್ದು , ನೋಡುಗರನ್ನು ಆಕರ್ಷಿಸಲಿದೆ.

ಅರಮನೆಯಲ್ಲಿ ನವರಾತ್ರಿ ಸಿದ್ಧತೆ :

ಮೈಸೂರು, ಸೆ.14- ಇತ್ತ ಸರ್ಕಾರ ಅದ್ಧೂರಿ ಮೈಸೂರು ದಸರಾಗೆ ಸಿದ್ದತೆ ನಡೆಸುತ್ತಿದ್ದರೆ, ಅತ್ತ ಮೈಸೂರಿನ ಅರಮನೆಯಲ್ಲಿ ಸದ್ದಿಲ್ಲದೆ ನವರಾತ್ರಿ ಪ್ರಕ್ರಿಯೆಗಳು ಆರಂಭಗೊಂಡಿದೆ. ರತ್ನ ಖಚಿತ ಸಿಂಹಾಸನ ಜೋಡಣೆ ಪ್ರಕ್ರಿಯೆ ನಾಳೆ ನಡೆಯಲಿದೆ. ರಾಜವಂಶಸ್ಥರು, ಖಾಸಗಿಯಾಗಿ ಅರಮನೆಯಲ್ಲಿ ಸಂಪ್ರದಾಯದಂತೆ ದಸರೋತ್ಸವ ಆಚರಿಸುತ್ತ ಬಂದಿದ್ದಾರೆ. ಇದರ ಪ್ರಮುಖ ಆಕರ್ಷಣೆ ರತ್ನ ಖಚಿತ ಸಿಂಹಾಸನ. ಈ ಸಿಂಹಾಸನವನ್ನು ಅರಮನೆಯ ಭದ್ರತಾ ಕೊಠಡಿಯಲ್ಲಿ ಬೇರ್ಪಡಿಸಿ ಇರಿಸಲಾಗುತ್ತದೆ. ಅದನ್ನು ಜೋಡಿಸುವ ಕಾರ್ಯ ನಾಳೆ ಬೆಳಗ್ಗೆ ನಡೆಯಲಿದೆ. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನವನ್ನು ಜೋಡಿಸಿ ರಾಜವಂಶಸ್ಥರು ಇದರ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ಆನಂತರ ಅದನ್ನು ಪ್ರತ್ಯೇಕಗೊಳಿಸಿ ಅರಮನೆಯ ಭದ್ರತೆ ಕೊಠಡಿಯಲ್ಲಿ ಇರಿಸಲಾಗುತ್ತದೆ.

Mysuru--03

ಯದು ವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನ, ಪೊಲೀಸರ ಬಿಗಿ ಭದ್ರತೆಯಲ್ಲಿ ಸಿಂಹಾಸನಕ್ಕೆ ನಾಳೆ ಬೆಳಗ್ಗೆ 7.45ರಿಂದ 8.45ರ ಸಮಯದಲ್ಲಿ ನವಗ್ರಹ ಹೋಮ ನಡೆಸಲಾಗುತ್ತದೆ. 9.45ರಿಂದ 10.15ರವರೆಗೆ ಶಾಂತಿ ಪೂಜೆ ಸಲ್ಲಿಸಿ ನಂತರ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಪ್ರಸ್ತಾವನೆ : 

ಮೈಸೂರು,ಸೆ.14-ದಸರಾ ಮಹೋತ್ಸವದಲ್ಲಿ ಹೆಚ್ಚಾಗಿ ಪ್ರವಾಸಿಗರು ಆಗಮಿಸಲಿದ್ದು , ವಾಹನಗಳ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 5ರವರೆಗೆ ಖಾಸಗಿ ವಾಹನಗಳನ್ನು ನಿಷೇಧಿಸಿ ಆಷಾಢ ಶುಕ್ರವಾರದ ಮಾದರಿಯಲ್ಲಿ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆದೊಯ್ದು ಮತ್ತೆ ಹಿಂದಿರುಗುವ ವ್ಯವಸ್ಥೆ ಬಗ್ಗೆ ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ. ಬೆಟ್ಟದಲ್ಲಿ ವಾಸಿಸುತ್ತಿರುವವರು, ಗಣ್ಯಾತಿಗಣ್ಯರು ಸಂಚರಿಸಲು ವ್ಯವಸ್ಥೆ ಮಾಡುವಂತೆ ಪೊಲೀಸರು ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Mysuru-Dasara-Ambari--01

ವಾಹನ ಪ್ರವೇಶವಿಲ್ಲ:

ದಸರಾ ಆಹಾರ ಮೇಳ ನಡೆಯುವ ಸ್ಕೌಟ್ ಮತ್ತು ಗೈಡ್ಸ್ ಮೈದಾನಕ್ಕೂ ಸಾರ್ವಜನಿಕರ ವಾಹನ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಸೆ.21ರಿಂದ ಆಹಾರ ಮೇಳ ನಡೆಯಲಿದ್ದು , ಈ ಸ್ಥಳಕ್ಕೆ ಗಣ್ಯರು ಹಾಗೂ ಅಂಗಡಿ ಮಳಿಗೆಗಳನ್ನು ತೆರೆಯುವವರ ವಾಹನಗಳನ್ನು ಹೊರತಪಡಿಸಿ ಇನ್ನಿತರ ವಾಹನಗಳನ್ನು ನಿಷೇಧಿಸಲಾಗಿದೆ.  ಹುಣಸೂರು ರಸ್ತೆಯ ಆರ್ಚ್‍ನಿಂದ ಕೌಟಿಲ್ಯ ಸರ್ಕಲ್‍ವರೆಗೆ ಪೂರ್ವ ಪಶ್ಚಿಮವಾಗಿ ವಾಹನ ಸಂಚಾರ ಇರುವುದಿಲ್ಲ ಎಂದು ಎಸಿಪಿ ಮಾದಯ್ಯ ತಿಳಿಸಿದ್ದಾರೆ. ಆಹಾರ ಮೇಳಕ್ಕೆ ಆಗಮಿಸುವವರಿಗೆ ಮಹಾರಾಜ ಕಾಲೇಜು, ಮಹಾರಾಜ ಜೂನಿಯರ್ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಅರಸು ಬೋರ್ಡಿಂಗ್ ಶಾಲಾ ಆವರಣ, ಪಂಚಾಯ್ತಿ ಕಚೇರಿ ಆವರಣ, ವಾಲಿಬಾಲ್ ಮೈದಾನಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

Sri Raghav

Admin