ದಸರಾ ಆನೆಗಳ ತೂಕ ಪರೀಕ್ಷೆ, ಕ್ಯಾಪ್ಟನ್ ಅರ್ಜುನನೇ ಬಲುಭಾರ

Dasara-Elephant--Dasara2017

ಮೈಸೂರು, ಆ.18- ನಗರಕ್ಕೆ ಆಗಮಿಸಿರುವ ಮೊದಲ ತಂಡದ ಗಜಪಡೆಗೆ ಇಂದು ತೂಕ ಮಾಡಿಸಲಾಯಿತು. ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನ ಅತಿ ಹೆಚ್ಚು ತೂಕ ಹೊಂದಿದ್ದಾನೆ. ಕಡಿಮೆ ತೂಕದ ಆನೆ ವಿಜಯ. ಅರ್ಜುನ-5250ಕೆಜಿ, ಬಲರಾಮ-4990ಕೆಜಿ, ವರಲಕ್ಷ್ಮಿ-4970ಕೆಜಿ, ಅಭಿಮನ್ಯು-4870, ಗಜೇಂದ್ರ-4600, ಭೀಮ-3410, ಕಾವೇರಿ-2820 ಹಾಗೂ ವಿಜಯಾ-2770ಕೆಜಿ ತೂಕ ಹೊಂದಿವೆ.

ದಸರಾ ಸಂದರ್ಭದಲ್ಲಿ ಆನೆಗಳ ಆರೋಗ್ಯ, ಅವುಗಳಿಗೆ ನೀಡಬೇಕಾದ ಪೌಷ್ಠಿಕಾಂಶ ಎಷ್ಟು ನೀಡಬೇಕು, ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ದಸರಾದಲ್ಲಿ ಪಾಲ್ಗೊಳ್ಳಲು ಬಂದ ಆನೆಗಳಿಗೆ ಮರುದಿನವೇ ತೂಕ ಮಾಡಿಸಲಾಗುತ್ತದೆ. ಆನೆಗಳ ಆರೈಕೆಗಾಗಿ ಭತ್ತದ ಹುಲ್ಲು ಬೆಣ್ಣೆ, ಕಬ್ಬು, ಬೆಲ್ಲ, ಕೊಬ್ಬರಿ, ವಿವಿಧ ರೀತಿಯ ಸೊಪ್ಪುಗಳನ್ನು ಅವುಗಳ ತೂಕದ ಆಧಾರದ ಮೇಲೆ ನೀಡಲಾಗುತ್ತದೆ. ಜಂಬೂ ಸವಾರಿಗೆ ಎರಡು ದಿನ ಬಾಕಿ ಇರುವಾಗ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮತ್ತೊಮ್ಮೆ ತೂಕ ಮಾಡಿಸಿ ಎಷ್ಟು ಪೌಷ್ಠಿಕಾಂಶ ನೀಡಬೇಕು ಎಂಬುದನ್ನು ನಿರ್ಧರಿಸಿ ಆಹಾರ ನೀಡಲಾಗುತ್ತದೆ.

ಕಾಡಿನಿಂದ ನಾಡಿಗೆ ಬಂದಿರುವ ಆನೆಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು, ಶಬ್ಧ, ಜನಸಂದಣಿ ಪರಿಚಯ ಮಾಡಿಸುವ ಸಲುವಾಗಿ ನಾಳೆಯಿಂದ ಬೆಳಗ್ಗೆ ಹಾಗೂ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತದೆ. ಕೆಲ ದಿನ ಕಳೆದ ನಂತರ ಅವುಗಳ ಬೆನ್ನಿನ ಮೇಲೆ ಮರಳಿನ ಮೂಟೆ ಭಾರ ಹೊರುವ ತಾಲೀಮು ನೀಡಲಾಗುತ್ತದೆ.  ಅರಮನೆ ಆವರಣದಲ್ಲಿ ನಿರ್ಮಿಸಿರುವ ಶೆಡ್‍ಗಳಲ್ಲಿ ಬೀಡು ಬಿಟ್ಟಿರುವ ಈ ಆನೆಗಳಿಗೆ ಸ್ನಾನ ಮಾಡಿಸಿ ಉಪಚಾರ ಮಾಡಲಾಗುತ್ತಿದೆ.

Sri Raghav

Admin