ದಾಖಲೆ ಪರಿಶೀಲನೆ ನೆಪದಲ್ಲಿ ಹಣ ಸುಲಿಗೆ : ಓರ್ವನ ಬಂಧನ
ಕೋಲಾರ, ಮೇ 3-ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲನೆ ನೆಪದಲ್ಲಿ ಹಣ ಕಿತ್ತುಕೊಳ್ಳುತ್ತಿದ್ದ ತಂಡದ ಓರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಚನ್ನಘಟ್ಟದ ರವಿ ಬಂಧಿತ ಆರೋಪಿ. ಈತ ಮಸ್ತಿಯ ಮುನಿರಾಜು ಮತ್ತು ಹರೀಶ್ನೊಂದಿಗೆ ಸೇರಿ ಮಾಲೂರು ತಾಲೂಕಿನ ಸಂತೆಹಳ್ಳಿ ಗೇಟ್ ಬಳಿ ಟಾಟಾ ಸುಮೋದಲ್ಲಿ ಬಂದು ಅಲ್ಲಿ ಸಂಚರಿಸುವ ಲಾರಿ ಇನ್ನಿತರ ವಾಹನಗಳ ದಾಖಲೆ ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡಿ ಪರಾರಿಯಾಗುತ್ತಿದ್ದರು.ನಿನ್ನೆ ರಾತ್ರಿಯೂ ಈ ಮಾರ್ಗವಾಗಿ ಬಂದ ಲಾರಿಯನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಿದ್ದಲ್ಲದೆ, ಚಾಲಕ ತೆಲುಗಿನಲ್ಲಿ ಮಾತನಾಡಿದ್ದರಿಂದ ಆತನ ಮೇಲೆ ಹಲ್ಲೆ ನಡೆಸಿ 3 ಸಾವಿರ ರೂ. ಕಸಿದು ಪರಾರಿಯಾಗಿದ್ದಾರೆ.
ಕೂಡಲೇ ಲಾರಿ ಚಾಲಕ ಲಾರಿ ಮಾಲೀಕನಿಗೆ ಈ ವಿಷಯ ತಿಳಿಸಿದ್ದರು. ಮಾಲೀಕ ತನ್ನ ಪರಿಚಿತರಿಗೆ ವಿಷಯ ತಿಳಿಸಿದಾಗ ಎಲ್ಲರೂ ಕೂಡಲೇ ಸ್ಥಳಕ್ಕೆ ಬಂದು ಟಾಟಾ ಸುಮೋದಲ್ಲಿ ಹೋಗುತ್ತಿದ್ದವನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ರವಿ ಸಿಕ್ಕಿಬಿದ್ದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.
ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಇತರೆ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ವಹಿಸಿದ್ದಾರೆ. ಈ ಸಂಬಂಧ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS