ದೆಹಲಿಯಿಂದ ಅಮೆರಿಕಾಗೆ ಕೇವಲ 1ರೂ.ನಲ್ಲಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ ‘ಸ್ಮಾರ್ಟ್’ ಬಾಯ್..!

Smart-Boy

ನವದೆಹಲಿ, ಮೇ 23- ವಿಮಾನಯಾನ ದರಗಳು ದುಬಾರಿಯಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಏರ್ ಇಂಡಿಯಾ ಯುವಕನೊಬ್ಬನಿಗೆ ದೆಹಲಿಯಿಂದ ಅಮೆರಿಕ ಪ್ರಯಾಣಕ್ಕೆ ನೀಡಿರುವ ಟಿಕೆಟ್ ದರ ಕೇವಲ 1 ರೂ. ಮಾತ್ರ. ದೇಶೀಯ ವಿಮಾನ ಪ್ರಯಾಣ ದರವೇ ದುಬಾರಿಯಾಗಿರುವಾಗ ಇದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾದರೆ ಉತ್ತರಕ್ಕಾಗಿ ಮುಂದೆ ಓದಿ.. ಈ ಸ್ವಾರಸ್ಯಕರ ಸಂಗತಿ ಹಿಂದೆ ಚಾಲಾಕಿ ತರುಣನೊಬ್ಬನಿದ್ದಾನೆ. ಈಗ ಎಲ್ಲೆಡೆ ವನ್ನಾಕ್ರೈ ಕುತಂತ್ರಾಂಶದ ಸುದ್ದಿಯೋ ಸುದ್ದಿ. ಅನ್ಯರ ಕಂಪ್ಯೂಟರ್ ಒಳಗೆ ನುಸುಳಿ ಲಕ್ಷಾಂತರ ರೂಪಾಯಿಗಳನ್ನು ಪೀಕಿಸುವ ರ್ಯಾನ್‍ಸಮ್ ಸೈಬರ್ ದಾಳಿ ಆತಂಕ ಸೃಷ್ಟಿಸಿರುವ ಈ ದಿನಗಳಲ್ಲಿ ಏರ್‍ಇಂಡಿಯಾ ಸಂಸ್ಥೆಯ ದುರ್ಬಲ ಟಿಕೆಟ್ ವ್ಯವಸ್ಥೆ ಬಗ್ಗೆ ಕೌಶಿಕ್ ಸಜ್ಞಾನಿ ಎಂಬ ಯುವಕ ಹ್ಯಾಕಿಂಗ್ ಮಾಡುವ ಮೂಲಕ ಎಚ್ಚರಿಕೆ ನೀಡಿ ಚಕಿತಗೊಳಿಸಿದ್ದಾನೆ.ಈ ಕುರಿತು ಏರ್ ಇಂಡಿಯಾಗೆ ಈ-ಮೇಲ್ ಸಂದೇಶ ಕಳುಹಿಸಿದ್ದ ಕೌಶಿಕ್ ಸಂಸ್ಥೆಯ ಅಪ್ಲಿಕೇಷನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ತಿಳಿಸಿದ್ದ. ಅಲ್ಲದೇ ಹ್ಯಾಕಿಂಗ್ ದುರ್ಬಳಕೆ ಮಾಡುವ ಕುತಂತ್ರ ಉದ್ದೇಶವೂ ತನಗಿಲ್ಲ. ಬೇರೆ ಹ್ಯಾಕರ್‍ಗಳು ಇದನ್ನು ದುರುಪಯೋಗ ಮಾಡಿಕೊಂಡಲ್ಲಿ ಸಂಸ್ಥೆಗೆ ಭಾರೀ ನಷ್ಟವಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದ.

ಈ-ಮೇಲ್ ಕಳುಹಿಸಿದ ಕೆಲವು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ ಏರ್ ಇಂಡಿಯಾದ ಫೈನಾನ್ಸ್ ಮ್ಯಾನೇಜರ್ ಕೌಶಿಕ್‍ಗೆ ಕರೆ ಮಾಡಿ ಟಿಕೆಟಿಂಗ್ ವ್ಯವಸ್ಥೆಯಲ್ಲಿರುವ ಸಮಸ್ಯೆ ಮತ್ತು ದೋಷಗಳನ್ನು ಸಾಬೀತು ಮಾಡುವಂತೆ ಸವಾಲು ಹಾಕಿದ್ದರು. ತಕ್ಷಣವೇ ಹ್ಯಾಕಿಂಗ್ ಮೂಲಕ ಕೌಶಿಕ್ ದೆಹಲಿಯಿಂದ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋಗೆ 1 ರೂ.ಗಳಲ್ಲಿ ಟಿಕೆಟ್ ಖರೀದಿಸಿ ಅದನ್ನು ಸಂಸ್ಥೆಗೆ ಮೇಲ್ ಮಾಡಿದ್ದ. ಮೇಲ್ ಜೊತೆ ಒಂದು ವಿಡಿಯೋವನ್ನು ಕಳುಹಿಸಿ ತಾನು ಹೇಗೆ ಟಿಕೆಟಿಂಗ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದೇನೆ ಎಂಬುದನ್ನು ತೋರಿಸಿದ್ದ. ಇದನ್ನು ನೋಡಿ ಏರ್ ಇಂಡಿಯಾ ಸಂಸ್ಥೆ ಹೌಹಾರಿತು. ತನ್ನ ವ್ಯವಸ್ಥೆಯಲ್ಲಿರುವ ದೊಡ್ಡ ದೌರ್ಬಲ್ಯದಿಂದ ಎಚ್ಚೆತ್ತುಕೊಂಡ ಏರ್ ಇಂಡಿಯಾ ಕೌಶಿಕ್‍ನ ಬುದ್ದಿವಂತಿಕೆ ಮತ್ತು ನಿಸ್ವಾರ್ಥ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಿತು. ಅಲ್ಲದೇ ಇಂಟರ್ನ್‍ಶಿಪ್ ಆಫರ್‍ನೊಂದಿಗೆ ಉದ್ಯೋಗದ ಭರವಸೆಯನ್ನೂ ನೀಡಿತು. ಆದರೆ ಕೌಶಿಕ್ ಸೌಜನ್ಯವಾಗಿಯೇ ಅದನ್ನು ನಿರಾಕರಿಸಿದ.

ಈ ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಹಿಂದೆ ಕೌಶಿಕ್ 4,028 ರೂ.ಗಳ ಗೋವಾ ಏರ್ ಟಿಕೆಟ್ ಕೇವಲ 4 ರೂ.ಗಳಿಗೆ ಖರೀದಿಸಿದ್ದ. ಆ ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆಗೆ ತಿಳಿಸಿದ್ದರೂ ಪ್ರಯೋಜನವಾಗಲಿಲ್ಲ. ಇಷ್ಟೇ ಅಲ್ಲದೇ ಕೌಶಿಕ್ ಹಲವಾರು ಬಾರಿ 1 ರೂ. ಬಿರಿಯಾನಿ ಆರ್ಡರ್ ಮಾಡಿ ಆ ಸಂಸ್ಥೆಗಳ ಸಮಸ್ಯೆಗಳನ್ನು ತಿಳಿಸಿ ಉಪಕಾರ ಮಾಡಿದ್ದ.   ಏರ್ ಇಂಡಿಯಾ ಸ್ಪೈಸ್ ಜೆಟ್, ಕ್ಲಿಯರ್ ಟ್ರಿಪ್, ಮೊಬಿಕ್ವಿಕ್ ಮೊದಲಾದ ಕಂಪನಿಗಳ ಲೋಪದೋಷಗಳನ್ನು ಈತ ಕಂಡು ಹಿಡಿದು ಸರಿಪಡಿಸಿಕೊಳ್ಳಲು ನೆರವಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin