ದೇಶದಲ್ಲಿ ಪ್ರತಿವರ್ಷ10 ಲಕ್ಷ ಮಂದಿ ಸಾವಿಗೆ ಕಾರಣವಾಗುತ್ತಿದೆ ತಂಬಾಕು..!

Tobacco-01
ತಂಬಾಕು ಬಳಕೆಯಿಂದ ವಿವಿಧ ಕಾಯಿಲೆಗಳಿಗೆ ಒಳಗಾಗಿ ದೇಶದಲ್ಲಿ ಪ್ರತಿವರ್ಷ ಕನಿಷ್ಠ 10 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಆದರೂ ತಂಬಾಕು ಬಳಕೆದಾರರು ಮಾತ್ರ ಕಡಿಮೆಯಾಗದಿರುವುದು ದುರ್ದೈವದ ಸಂಗತಿ.ಸರ್ಕಾರಗಳು ತಂಬಾಕು ಬಳಕೆಯಿಂದಾಗುವ ಮರಣ ಪ್ರಮಾಣ ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಮತ್ತಿತರ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಇದು ಪರಿಣಾಮ ಬೀರಲ್ಲ. ತಂಬಾಕು ಬಳಕೆಯಲ್ಲಿ ಭಾರತ ವಿಶ್ವದ ಎರಡನೆ ಸ್ಥಾನದಲಿದ್ದು, ಶೇ.35ರಷ್ಟು ಅಥವಾ 275 ದಶಲಕ್ಷ ಜನತೆ ತಂಬಾಕು ಸೇವನೆ ಮಾಡುತ್ತಿದ್ದಾರೆ. ಪ್ರತಿವರ್ಷ ಕನಿಷ್ಠ 10 ಲಕ್ಷ ಮಂದಿ ತಂಬಾಕು ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ . ಕರ್ನಾಟಕದಲ್ಲಿ ಶೇ.28.2ರಷ್ಟು ಜನ ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ . ತಂಬಾಕು ಬಳಕೆ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿರುವುದಲ್ಲದೆ, ನಮ್ಮ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.ಇದೀಗ ಕೇಂದ್ರ ಸರ್ಕಾರ ಜರಿಗೊಳಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಪದ್ಧತಿಯಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾದ ವಸ್ತುಗಳಿಗೆ ಸಿನ್ ಟ್ಯಾಕ್ (ಪಾಪದ ತೆರಿಗೆ) ವಿಧಿಸಲು ಉದ್ದೇಶಿಸಲಾಗಿದೆ.

ಮುಖ್ಯ ಆರ್ಥಿಕ ಸಲಹೆಗಾರರು ನೀಡಿರುವ ವರದಿಯ ಪ್ರಕಾರ ಸಿಗರೇಟು, ಬೀಡಿ ಮತ್ತು ಜಿಗಿಯುವ ತಂಬಾಕು ಸೇರಿದಂತೆ ಎಲ್ಲ ಬಗೆಯ ತಂಬಾಕು ಉತ್ಪನ್ನಗಳಿಗೆ ಜಿಎಸ್ಟಿಯಲ್ಲಿ ಶೇ.40ರಷ್ಟು ತೆರಿಗೆ ವಿಧಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಆದರೆ, ಕಳೆದ ಅಕ್ಟೋಬರ್ 20ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಶೇ.26ರಷ್ಟು ಪಾಪದ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಇದು ಸಾರ್ವಜನಿಕ ಆರೋಗ್ಯದ ಮೇಲಷ್ಟೇ ಅಲ್ಲ, ದೇಶದ ಆದಾಯ ಸಂಗ್ರಹದ ಮೇಲೂ ಗಂಭೀರ ಪರಿಣಾಮ ಬೀರಲಿರುವುದರಿಂದ ಆ ಬಗ್ಗೆ ಮರುಪರಿಶೀಲನೆ ನಡೆಸುವ ತುರ್ತು ಅಗತ್ಯವಿದೆ.

ಉದ್ದೇಶಿತ ಪಾಪದ ತೆರಿಗೆ ವಿಧಿಸುವುದರ ಹಿಂದೆ ಎರಡು ಅಂಶಗಳಿವೆ. ಒಂದು ಸಮಾಜಕ್ಕೆ ಆಗುವ ಹಾನಿಗೆ ತಕ್ಕ ಬೆಲೆ ತೆರಬೇಕು ಎಂಬುದು ಮತ್ತೊಂದು ಬೆಲೆ ಹೆಚ್ಚಳ ಮಾಡುವ ಮೂಲಕ ಅದರ ಬಳಕೆ ತಗ್ಗಿಸುವುದು. ಆದರೆ, ಶೇ.26ರಷ್ಟು ತೆರಿಗೆ ವಿಧಿಸುವುದಾದರೆ ಆ ಎರಡು ಉದ್ದೇಶಗಳೂ ಈಡೇರುವುದಿಲ್ಲ. ತಂಬಾಕು ಉತ್ಪನ್ನಗಳಿಂದ ಈಗ ಬರುತ್ತಿರುವ ಆದಾಯವೂ ಕಡಿಮೆಯಾಗಲಿದೆ. ಅದಕ್ಕಿಂತ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಬೆಲೆ ಇನ್ನು ಕಡಿಮೆಯಾಗಿ ಸುಲಭ ದರದಲ್ಲಿ ಜನರ ಕೈಗೆ ಸಿಗುವಂತಾಗುತ್ತದೆ. ಜತೆಗೆ ಮಕ್ಕಳು ಮತ್ತು ಯುವಜನತೆಗೆ ತಂಬಾಕು ಉತ್ಪನ್ನಗಳ ಬಳೆಕೆಗೆ ಉತ್ತೇಜನ ನೀಡಿದಂತಾಗುತ್ತದೆ.

ತಂಬಾಕು ಬಳಕೆಯಿಂದ ದೇಶದ ಆರೋಗ್ಯ ಮತ್ತು ಆರ್ಥಿಕ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ತಂಬಾಕು ಸಂಬಂಧಿ ರೋಗಗಳಿಗೆ ಒಟ್ಟಾರೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 2011ರಲ್ಲಿ ಮಾಡಿರುವ ವೆಚ್ಚ 1.04 ಲಕ್ಷ ಕೋಟಿ (17 ಬಿಲಿಯನ್) ಅಥವಾ ದೇಶದ ಒಟ್ಟಾರೆಯ ಜಿಡಿಪಿಯ ಶೇ.1.16ರಷ್ಟು.
ಜಿಎಸ್ಟಿ ಪದ್ಧತಿಯಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಕಡಿಮೆ ತೆರಿಗೆ ವಿಧಿಸುವುದರಿಂದ ತಂಬಾಕು ಉತ್ಪನ್ನಗಳು ಅತ್ಯಂತ ಸುಲಭ ದರದಲ್ಲಿ ಮಕ್ಕಳು ಮತ್ತು ಯುವಜನತೆಗೆ ಸಿಗುವ ಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ತಂಬಾಕು ಸಂಬಂಧಿ ರೋಗಗಳ ಚಿಕಿತ್ಸಾ ವೆಚ್ಚ ಏರಿಕೆಯಾಗಿ, ಆರೋಗ್ಯ ರಕ್ಷಣೆ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಮತ್ತು ದೇಶದಲ್ಲಿ ಉತ್ಪಾದನಾ ಶಕ್ತಿ ಕುಂಠಿತವಾಗಲಿದೆ.
ಇದರಿಂದ ದೇಶದಲ್ಲಿ ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ, ಇದು ದೇಶದ ಪ್ರಗತಿ ದೃಷ್ಟಿಯಿಂದ ಶುಭ ಸುದ್ದಿಯಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ತಂಬಾಕು ಬಳಕೆದಾರರನ್ನು ನಿರುತ್ತೇಜಿಸಲು ಸರ್ಕಾರ ಗರಿಷ್ಠ ತೆರಿಗೆ ವಿಧಿಸಬೇಕು ಎಂದು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಕುರಿತಾದ ಉನ್ನತ ಮಟ್ಟದ ಸಮಿತಿಯ ಸದಸ್ಯರೂ ಆಗಿರುವ ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್ ಆಗ್ರಹಿಸಿದ್ದಾರೆ .
ದೇಶದಲ್ಲಿ ಪ್ರಸ್ತುತ ಶೇ.48ರಷ್ಟು ಪುರುಷರು ಹಾಗೂ ಶೇ.20ರಷ್ಟು ಮಹಿಳೆಯರು ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ . ಹಾಗಾಗಿ ಅದರ ಸಂಬಂಧಿ ಕಾಯಿಲೆಗಳಿಗೆ ಪ್ರತಿವರ್ಷ 10 ದಶಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ . ತಂಬಾಕು ಮಾರುಕಟ್ಟೆಯಲ್ಲಿ ಶೇ.48ರಷ್ಟು ಮಂದಿ ಬೀಡಿ, ಶೇ.38ರಷ್ಟು ಜಿಗಿಯುವ ತಂಬಾಕು ಮತ್ತು ಶೇ.14ರಷ್ಟು ಸಿಗರೇಟು ಸೇವನೆ ಮಾಡುತಿದ್ದರೆ .
ಬೀಡಿ, ಜಿಗಿಯುವ ತಂಬಾಕು, ಸಿಗರೇಟು ಸೇರಿದಂತೆ ಬೇರೆ ಬೇರೆ ಬಗೆಯ ತಂಬಾಕು ಉತ್ಪನ್ನಗಳ ಮೇಲೆ ಬೇರೆ ಬೇರೆ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಹೊಸ ಜಿಎಸ್ಟಿ ಪದ್ಧತಿಯಡಿಯೂ ಬೀಡಿಗಳಿಗೆ ತೆರಿಗೆ ವಿಧಿಸಲಾಗುತ್ತಿಲ್ಲ. ಹಾಗಾಗಿ ಬಡತನದ ವಿಷ ವರ್ತುಲಕ್ಕೆ ಸಿಲುಕಿರುವ ಜನರು ಕಡಿಮೆ ಬೆಲೆಗೆ ಸಿಗುವ ಬೀಡಿ ಸೇದಿ ಅವರು ತಂಬಾಕು ಸಂಬಂಧಿ ಕಾಯಿಲೆಗಳಿಗೆ ಹಾಗೂ ಆರೋಗ್ಯ ರಕ್ಷಣೆಗೆ ಹೆಚ್ಚಿನ ಹಣ ವ್ಯಯ ಮಾಡಬೇಕಾದ ಪರಿಸ್ಥಿತಿ ತಲೆದೋರಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಎಲ್ಲ ಬಗೆಯ ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ಟಿ ಅಡಿ ಶೇ.40ರಷ್ಟು ತೆರಿಗೆ ವಿಧಿಸಲೇಬೇಕು ಎಂದು ಇನ್ಸ್‍ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಐಪಿಎಚ್) ಸಹಾಯಕ ನಿರ್ದೇಶಕ ಡಾ.ಉಪೇಂದ್ರ ಭೋಜಾನಿ ಹೇಳಿದ್ದಾರೆ.
ಬೀಡಿ ಸೇವನೆ ಮಾಡಿ ಧ್ವನಿ ಪೆಟ್ಟಿಗೆ ಕಳೆದುಕೊಂಡಿರುವ ರಾಮನಗರ ಜಿಲ್ಲೆಯ  ಕನಕಪುರ ತಾಲೂಕಿನ ರೈತ ದುರ್ಗಯ್ಯ 30 ವರ್ಷ ಸತತವಾಗಿ ಬೀಡಿ ಸೇವನೆ ಮಾಡಿ ಗಂಟಲು ಕ್ಯಾನ್ಸರ್‍ಗೆ ತುತ್ತಾಗಿ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರ ಏಕೆ ಬೀಡಿಗಳನ್ನು ಜನಸಮಾನ್ಯರ ಕೈಗೆಟಕುವಂತೆ ಮಾಡುತ್ತಿದೆಯೋ ಆರ್ಥವಾಗುತ್ತಿಲ್ಲ. ಸರ್ಕಾರಕ್ಕೆ ಬಡಜನರ ಆರೋಗ್ಯದ ಕಾಳಜಿ ಇಲ್ಲವೆ..? ಸರ್ಕಾರಕ್ಕೆ ನಿಜಕ್ಕೂ ಗ್ರಾಮೀಣ ಜನರ ಬದುಕಿನ ಬಗ್ಗೆ ಕಾಳಜಿ ಇದ್ದರೆ ಅದು ಬೀಡಿಗಳಿಗೆ ಸಿಗರೇಟಿಗಿಂತಲೂ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಬಹಳಷ್ಟು ಮಂದಿಪ್ರತಿಪಾದಿಸಿದ್ದಾರೆ .ಪ್ರಸಕ್ತ ಸನ್ನಿವೇಶದಲ್ಲಿ ಅಬಕಾರಿ ತೆರಿಗೆ ಎಲ್ಲ ಸೇರಿ ತಂಬಾಕು ಉತ್ಪನ್ನಗಳ ಮೇಲೆ ಶೇ.40ರಷ್ಟು ಪಾಪದ ತೆರಿಗೆ ವಿಧಿಸುವುದು ಅತ್ಯಂತ ಸೂಕ್ತ. ಇದರಿಂದ ತಂಬಾಕಿನ ಮೇಲೆ ತೆರಿಗೆ ಹೊರೆಯನ್ನು ಈಗಿರುವಂತೆ ಕಾಯ್ದುಕೊಳ್ಳುವ ಜತೆಗೆ ಭಾರತೀಯರು ಸುಲಭವಾಗಿ ಧೂಮಪಾನದಂತಹ ದುಶ್ಚಟಕ್ಕೆ ಬಲಿಯಾಗಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವುದು ತಪ್ಪುತ್ತದೆ.

► Follow us on –  Facebook / Twitter  / Google+

Sri Raghav

Admin