ದೇಶ ಹಿತಾಸಕ್ತಿಗಾಗಿ ಕೈಗೊಂಡಿರುವ ಕಠಿಣ ನಿರ್ಧಾರದಿಂದ ಹಿಂದೆ ಸರಿಯಲ್ಲ : ಮೋದಿ

Modi-Mumnbai

ಮುಂಬೈ,ಡಿ.24-ದೇಶ ಹಿತಾಸಕ್ತಿಗಾಗಿ ಕೈಗೊಂಡಿರುವ ಕಠಿಣ ನಿರ್ಧಾರಗಳಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ನೋಟು ರದ್ಧತಿ ಕ್ರಮವನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಹಣದುಬ್ಬರ ಸುಧಾರಿಸಿದ್ದು , ಹೂಡಿಕೆದಾರರು ಬಂಡವಾಳ ತೊಡಗಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಜಾಗತಿಕ, ಆರ್ಥಿಕ ಸ್ಥಿತಿಯು ಕುಂಠಿತವಾಗಿರುವ ಈ ಸನ್ನಿವೇಶದಲ್ಲಿ ಭಾರತದ ಈ ಬೆಳವಣಿಗೆ ಆಶಾದಾಯಕವಾಗಿದೆ ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ವಿತ್ತ ಕೊರತೆ ಕಡಿಮೆಯಾಗಿದೆ. ವಿದೇಶಿ ವಿನಿಮಯ ಮೀಸಲು ವೃದ್ಧಿಯಾಗಿದೆ. ಅದೇ ರೀತಿ ಹಣದುಬ್ಬರ ಕಡಿಮೆಯಾಗಿದೆ ಎಂದು ತಿಳಿಸಿದರು. ಮುಂಬೈನಲ್ಲಿಂದು ಸೆಬಿಯ ಎನ್‍ಐಎಸ್‍ಎಂ ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರಕುಗಳು ಮತ್ತು ಸೇವಾ ತೆರಿಗೆಗಳು(ಜಿಎಸ್‍ಟಿ) ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.  ನೋಟು ನಿಷೇಧವನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡ ಮೋದಿ, ದೀರ್ಘಾವಧಿ ಕಾಲದಲ್ಲಿ ಇದು ದೇಶದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಲಿದೆ. ಈಗ ಎದುರಾಗಲಿರುವ ಅನಾನುಕೂಲ ಅಲ್ಪಾವಧಿಯದ್ದು ಎಂದು ವಿಶ್ಲೇಷಿಸಿದರು.

ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅಲ್ಪಕಾಲಿಕ ಯೋಜನೆಗಳಿಗೆ ಕೈ ಹಾಕುವುದಿಲ್ಲ. ದೇಶದ ಹಿತಾಸಕ್ತಿಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin