ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಗೆ ಮಹೂರ್ತ ಫಿಕ್ಸ್

Nanjanagudu-Gundlupete-elec

ಬೆಂಗಳೂರು, ಮಾ.9- ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಏ.9ರಂದು ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.  ಏ.9ರಂದು ಚುನಾವಣೆ ನಡೆಯಲಿದ್ದು, ಏ.13ರಂದು ಫಲಿತಾಂಶ ಪ್ರಕಟವಾಗಲಿದೆ. ಮಾ.14ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಮಾ.21 ಕೊನೆಯ ದಿನವಾಗಿದ್ದು, ಮಾ.22ರಂದು ನಾಮಪತ್ರ ಪರಿಶೀಲನೆ, 24ರಂದು ನಾಮಪತ್ರ ವಾಪಸ್ ಪಡೆಯುವ ದಿನಾಂಕವನ್ನು ಆಯೋಗ ನಿಗದಿ ಮಾಡಿದೆ.  ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ನಂಜನಗೂಡು ಹಾಗೂ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಗುಂಡ್ಪುಪೇಟೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ದಿನಾಂಕ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳು ಇದ್ದವು.

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಅಖಾಡದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ಸಮಾರೋಪಸಮಾರಂಭಗಳು ನಡೆದಿದ್ದವು.  ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ. ಆಡಳಿತ ಮತ್ತು ಪ್ರತಿಪಕ್ಷಗಳೆರಡಕ್ಕೂ ಈ ಚುನಾವಣೆ ಪ್ರತಿಷ್ಟೇಯ ಪ್ರಶ್ನೆಯಾಗಿದೆ.  ಕಾಂಗ್ರೆಸ್ ತೊರೆದು ಶ್ರೀನಿವಾಸ್‍ಪ್ರಸಾದ್ ಅವರು ಬಿಜೆಪಿ ಸೇರಿದ್ದು, ನಂಜನಗೂಡು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಅದೇ ರೀತಿ ಗುಂಡ್ಲುಪೇಟೆಯಲ್ಲಿ ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಕಣಕ್ಕಿಳಿಯಲಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಅವರ ಎದುರಾಗಿ ಜೆಡಿಎಸ್‍ನಿಂದ ಕಾಂಗ್ರೆಸ್ ಸೇರಿರುವ ಕಳಲೆ ಕೇಶವಮೂರ್ತಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್ ಪಕ್ಷ ಇನ್ನೂ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.   ಒಟ್ಟಾರೆ ಇಂದಿನಿಂದ ಉಪಚುನಾವಣಾ ಕಣ ರಂಗೇರಲಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಈ ಚುನಾವಣೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin