ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ನಡೆಯುವುದೇ ಡೌಟ್..!

Nanjanagud

ಬೆಂಗಳೂರು, ಮಾ.7– ರಾಜ್ಯದ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಮೈಸೂರು ಜಿಲ್ಲೆಯ ನಂಜನಗೂಡು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯುವುದೇ ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ.  ಕರ್ನಾಟಕ ವಿಧಾನಸಭೆ ಮಹಾ ಚುನಾವಣೆ 2018ರ ಮಾರ್ಚ್‍ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಇನ್ನೊಂದು ವರ್ಷ ಮುಂದಿಟ್ಟುಕೊಂಡು ಉಪ ಚುನಾವಣೆ ನಡೆಸುವುದು ಅನಗತ್ಯ ಖರ್ಚು. ಅಲ್ಲದೆ, ಕೊನೆಯ ಆರು ತಿಂಗಳು ಚುನಾವಣೆ ಸಮೀಪದ ಅವಧಿ ಎಂದು ಪರಿಗಣಿಸಲ್ಪಡುವುದರಿಂದ ಕೇವಲ ಆರು ತಿಂಗಳ ಅವಧಿಗೆ ಚುನಾವಣೆ ನಡೆಸುವುದು ಎಷ್ಟು ಸೂಕ್ತ ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲದೇ ಚುನಾವಣೆ ಮುಂದಿಟ್ಟುಕೊಂಡು ಉಪ ಚುನಾವಣೆ ನಡೆಸಿ ಅದರ ಫಲಿತಾಂಶ ಏನೇ ಆದರೂ ಒಂದು ರಾಷ್ಟ್ರೀಯ ಪಕ್ಷಕ್ಕೆ ಹೊಡೆತ, ಇನ್ನೊಂದಕ್ಕೆ ಸಂತೋಷ. ಇದರ ಗೊಡವೆಯೇ ಬೇಡ ಎಂದು ಕಾಂಗ್ರೆಸ್, ಬಿಜೆಪಿ ನಿರ್ಧರಿಸಿವೆ ಎನ್ನಲಾಗಿದೆ.

ಒಂದು ಮಾಹಿತಿ ಪ್ರಕಾರ ಪಂಚರಾಜ್ಯ ಚುನಾವಣೆ ಫಲಿತಾಂಶದ ನಂತರ ಉಪ ಚುನಾವಣೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಂದರೆ ಮಾ.11ರ ನಂತರ ಘೋಷಣೆ ಆಗಬೇಕು. ಇಲ್ಲಿ ಚುನಾವಣೆ ಪ್ರಕ್ರಿಯೆಗೆ ಒಂದು ತಿಂಗಳಾದರೂ ಕಾಲಾವಧಿ ಬೇಕು. ಮಾರ್ಚ್ ಅಂತ್ಯಕ್ಕೆ ಚುನಾವಣೆ ಘೋಷಣೆ ಆದರೆ ಏಪ್ರಿಲ್ ಮಧ್ಯೆ ಅಥವಾ ಅಂತ್ಯದಲ್ಲಿ ಫಲಿತಾಂಶ ಹೊರ ಬರಲಿದೆ. ಅಲ್ಲಿಗೆ 2018ರ ಮೇನಲ್ಲಿ ಚುನಾವಣೆ ಬರಲಿದೆ. ಇದರಿಂದ ಒಂದು ವರ್ಷದ ಅವಧಿಗೆ ಚುನಾವಣೆ ಎದುರಿಸುವ ಆಸಕ್ತಿಯೂ ಕಾಣುತ್ತಿಲ್ಲ.   ಚುನಾವಣಾ ಆಯೋಗ ನಿರ್ಧರಿಸಿಯೇ ಬಿಟ್ಟರೆ ಚುನಾವಣೆ ನಡೆಯುತ್ತದೆಯೇ ಹೊರತು, ಅವರು ಹಿಂದೇಟು ಹಾಕಿದರೆ ಒತ್ತಡ ಹೇರುವ ಆಸಕ್ತಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ. ಇನ್ನು ಜೆಡಿಎಸ್ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನುಮಾನ ಎನ್ನಲಾಗುತ್ತಿದೆ.

ಸದ್ಯದ ಪ್ರಕಾರ ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿರಿಸಿಕೊಂಡು ಚುನಾವಣೆ ದಿನಾಂಕ ಘೋಷಿಸಬೇಕು. ಒಟ್ಟಾರೆ ಸ್ವಾಭಿಮಾನದ ಪ್ರತಿಷ್ಠೆ ಹಾಗೂ ಅನುಕಂಪದ ಅಲೆಯ ಮೇಲೆ ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಅದಕ್ಕೆ ಮತದಾರ ಯಾವ ರೀತಿ ಉತ್ತರ ನೀಡುತ್ತಾನೆ ಅನ್ನುವುದು ಗೊತ್ತಿಲ್ಲ.

ಅಖಾಡದಲ್ಲಿ ಯಾರು?

ನಂಜನಗೂಡಿನಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಇದೀಗ ಬಿಜೆಪಿ ಸೇರ್ಪಡೆಯಾಗಿ ಚುನಾವಣಾ ಕಣಕ್ಕಿಳಿಯಲಿz್ದÁರೆ. ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವ ಕಳಲೆ ಕೇಶವಮೂರ್ತಿ ಅವರನ್ನು ಶ್ರೀನಿವಾಸ ಪ್ರಸಾದ್ ವಿರುದ್ಧ ಕಣಕ್ಕಿಳಿಸಲಿದೆ.  ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅವರ ಪತ್ನಿ ಗೀತಾಪ್ರಸಾದ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಬಿಜೆಪಿ ಕಳೆದ ಬಾರಿ ಪರಾಭವಗೊಂಡಿದ್ದ ನಿರಂಜನ್ ಅವರನ್ನು ಕಣಕ್ಕೀಳಿಸಿದರೆ, ಜೆಡಿಎಸ್ ಪಕ್ಷ ಇನ್ನೂ ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin