ನಕಲಿ ಕ್ಲೀನಿಕ್ ಮೇಲೆ ದಾಳಿ, ನಕಲಿ ವೈದ್ಯ ಪರಾರಿ
ಗುಡಿಬಂಡೆ, ಏ.7- ನಕಲಿ ವೈದ್ಯನೋರ್ವ ನಡೆಸುತ್ತಿದ್ದ ಕ್ಲೀನಿಕ್ ಮೇಲೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ವೈದ್ಯ ಪರಾರಿಯಾದ ಘಟನೆ ನಡೆದಿದೆ.ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಯಾರಬ್ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಎಂಬ ಹೆಸರಿನಲ್ಲಿ ಮೌಲಾಸಾಭ್ ಎಂಬಾತನಿಗೆ ಸೇರಿದ ಕ್ಲೀನಿಕ್ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈತನಿಗೆ ಅನೇಕ ಬಾರಿ ಇಲಾಖೆಯಿಂದ ನೋಟಿಸ್ ನೀಡಿದರೂ ಕೂಡ ಕ್ಯಾರೇ ಎನ್ನದೇ ತನ್ನ ಚಿಕಿತ್ಸೆ ಮುಂದುವರೆಸಿದ್ದ.
ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಂದಾಯ ಹಾಗೂ ಪೊಲೀಸ್ ಇಲಾಖೆಯೊಂದಿಗೆ ದಾಳಿ ನಡೆಸಿದ ವೇಳೆ ಸುಮಾರು 30 ಸಾವಿರ ಮೌಲ್ಯದ ಅವಧಿ ಮುಗಿದ ಔಷಧಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಕಲಿ ವೈದ್ಯ ಮೌಲಾಸಾಭ್ ಅಲ್ಲಿಂದ ಪರಾರಿಯಾಗಿದ್ದು, ಕ್ಲೀನಿಕ್ ಗುಡಿಬಂಡೆ ಪೊಲೀಸರು ಬೀಗ ಮುದ್ರೆ ಜಡಿದಿದ್ದಾರೆ. ಕೆಲವರು ಹೇಳುವ ಪ್ರಕಾರ ಈ ನಕಲಿ ವೈದ್ಯ ಸುಮಾರು 10-15 ವರ್ಷಗಳಿಂದ ಇಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾನೆ. ಆಂಧ್ರಪ್ರದೇಶ ಮೂಲದ ವೈದ್ಯನೋರ್ವನ ಪ್ರಮಾಣ ಪತ್ರವನ್ನು ಬಳಸಿಕೊಂಡಿದ್ದ. ಬಾಗೇಪಲ್ಲಿ ಕಡೆಯವನಾದರೂ ಸಹ ಹಂಪಸಂದ್ರ ಗ್ರಾಮದಲ್ಲಿ ತನ್ನ ಪ್ರಭಾವವನ್ನು ಬೆಳೆಸಿಕೊಂಡಿದ್ದ.
ಇದೇ ಗ್ರಾಮದಲ್ಲಿ ಮತ್ತೋರ್ವ ನಕಲಿ ವೈದ್ಯ ರಾಮಚಂದ್ರರೆಡ್ಡಿ ಎಂಬುವವನು ಸಹ ಕ್ಲೀನಿಕ್ ನಡೆಸುತ್ತಿದ್ದ. ಮೌಲಾಸಾಭ್ ಕ್ಲೀನಿಕ್ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದರುಂದ ಕುಪಿತಗೊಂಡ ಮೌಲಾಸಾಭ್ ತನ್ನ ಪ್ರಭಾವ ಬಳಸಿ ಹಾಗೂ ಆರೋಗ್ಯ ಇಲಾಖೆಗೆ ರಾಮಚಂದ್ರರೆಡ್ಡಿ ಮೇಲೆ ಮೂಗರ್ಜಿಗಳನ್ನು ಬರೆದು, ರಾಮಚಂದ್ರರೆಡ್ಡಿ ಕ್ಲೀನಿಕ್ ಮುಚ್ಚಿಸಿದ್ದರು. ನಂತರ ಇವನ ಬಂಡವಾಳ ಬಯಲಾಗಿದೆ.ಈ ವೇಳೆ ತಹಸೀಲ್ದಾರ್ ಜಿ.ನಂಜಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಮಹಿಮಾ, ಔಷಧ ನಿಯಂತ್ರಣಾಧಿಕಾರಿ ಕೆ.ಸುರೇ, ಪೊಲಿಸ್ ಸಬ್ಇನ್ಸ್ಪೆಕ್ಟರ್ ಪಾಪಣ್ಣ ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >