ನಕಾರಾತ್ಮಕ ಭಾವನೆಗಳನ್ನು ದೃಢ ಮನಸ್ಸಿನಿಂದ ಒಮ್ಮೆ ಒದ್ದು ಓಡಿಸಿಬಿಡಿ

Spread the love

Negetive-Feelings

ಪ್ರಸಿದ್ಧ ಫ್ರೆಂಚ್ ತತ್ವಜಾನಿ ಬ್ಲೇಸ್ ಪಾಸ್ಕಲ್ ಅವರಿಗೆ ಯಾರೋ ಹೇಳಿದರಂತೆ. ನನಗೆ ನಿಮ್ಮಂತೆ ಮೆದುಳು ಇದ್ದಿದ್ದರೆ ನಾನು ಇನ್ನೂ ಉತ್ತಮ ವ್ಯಕ್ತಿಯಾಗುತ್ತಿದ್ದೆ ಅಂತ. ಅದಕ್ಕೆ ಫಾಸ್ಕಲ್ ನೀಡಿದ ಉತ್ತರ ತುಂಬಾ ಮನೋಜ್ಞವಾಗಿದೆ. ಮೊದಲು ಉತ್ತಮ ವ್ಯಕ್ತಿಯಾಗು ನಿನಗೂ ನನ್ನಂಥ ಮೆದುಳು ಬರುತ್ತದೆ ಎಂದು. ಉತ್ತಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಸಬೇಕೆಂದರೆ ನಾವೂ ಉತ್ತಮ ವ್ಯಕ್ತಿಗಳಾಗಬೇಕೆಂದಾ ಯಿತು. ನಮ್ಮಲ್ಲಿ ಶೀಲ ಸಂಪನ್ನತೆ ಪ್ರಾಮಾಣಿಕತೆ ಧನಾತ್ಮಕ ಮನೋಭಾವ ಇರಬೇಕು. ಧನಾತ್ಮಕ ಮನೋಭಾವಕ್ಕೆ ಮೂಲ ಮಾನಸಿಕ ದೃಢತೆ.

+

ಸಮಯ ಯಾರಿಗೂ ಕಾಯುವುದಿಲ್ಲ. ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಬೇಕಾಗಿರುವುದು ಮಾನಸಿಕ ದೃಢತೆ. ದೈಹಿಕವಾಗಿ ಸದೃಢಗೊಳ್ಳಲು ದಿನನಿತ್ಯ ವಾಕಿಂಗ್, ಯೋಗ , ಜಾಗಿಂಗ್ ಹೀಗೆ ಏನೇನೋ ಮಾಡುತ್ತೇವೆ. ಆದರೆ ಮನಸಿನ ದೃಢತೆಗೆ ಗಮನ ಕೊಡುವುದೇ ಇಲ್ಲ. ಕಾಡು ಪ್ರಾಣಿಗಳು ತಮಗಿಂತ ಬಲಿಷ್ಠವಾದ ಪ್ರಾಣಿಗಳನ್ನು ಗೆದ್ದು ಪ್ರಬಲವಾಗಿ ಕಾಣುತ್ತವೆ. ನಾವು ನಿಜವಾಗಿಯೂ ಬಲಹೀನರು. ಅದು ಹೇಗೆ ಅಂತಿರೇನು? ಒಂದು ಸಾರಿ ಯಾವುದಾದರೂ ಬಲಹೀನತೆಗೆ ಬಲಿಯಾಗಿಬಿಟ್ಟರೆ ಅದರಿಂದಾಚೆ ಬರುವುದು ಕಷ್ಟವಾಗುತ್ತದೆ. ಅಂತಹ ಬಲಹೀನತೆಯ ಕಂದಕದಿಂದ ಹೊರಬರಲು ಬಹಳ ಸಮಯ ಹಿಡಿಯುತ್ತದೆ.

ಮಾನಸಿಕ ಪಕ್ವತೆಯ ಸಂಕೇತವೇ ದೃಢತೆ :

ದೃಢತೆಯೆಂದರೆ ಅತ್ಯುತ್ತಮ ಸಾಧನೆಗೆ ನಿಮ್ಮನ್ನು ಅಣಿಗೊಳಿಸುವ ಸಿದ್ಧತೆ. ಸಿದ್ಧತೆಯಿಂದ ದೃಢÀತೆ. ಮಾನಸಿಕವಾಗಿ ಪಕ್ವವಾದಾಗ ದೃಢತೆ ಬೆಳೆಯುತ್ತದೆ. ದೃಢತೆಯೆನ್ನುವುದು ತಪಸ್ಸಿದ್ದಂತೆ. ಒಮ್ಮೆಲೇ ಸಾಧಿಸಲಿಕ್ಕಾಗದು. ನಮ್ಮ ಬುದ್ಧಿಯನ್ನು ಮನಸ್ಸಿನ ಕೈಗೆ ಕೊಟ್ಟರೆ ದೃಢತೆ ಸಾಧಿಸುವುದು ಕಷ್ಟ. ಅದೇ ಮೆದುಳಿನ ಕೈಗೆ ಕೊಟ್ಟರೆ ದೃಢತೆಯು ಚಿಗರೊಡೆದು ಕೊಳ್ಳಲು ಪ್ರಾರಂಭಿಸುತ್ತದೆ. ಹಣ ಕೊಟ್ಟು ಕೊಳ್ಳುವಂಥ ವಸ್ತುವಲ್ಲ ದೃಢತೆ. ಅದು ನಮ್ಮ ಬಗ್ಗೆ ನಮಗಿರುವ ಭದ್ರವಾದ ಭಾವ. ನಮ್ಮ ಅನುಭವಗಳ ಆಧಾರದಲ್ಲಿ ಯೋಚಿಸಿ ವಾಸ್ತವಿಕತೆಯನ್ನು ಸೇರಿಸಿದಾಗ ದೃಢತೆಯ ಕಡೆಗೆ ಸಾಗಲು ಸಾಧ್ಯ. ತಂದೆ-ತಾಯಿ ಮಾರ್ಗದರ್ಶನ
ಮಾನಸಿಕ ದೃಢತೆಯೆನ್ನುವುದು ಬಾಲ್ಯದಲ್ಲಿಯೇ ಚಿಗುರೊಡೆಯುತ್ತದೆ. ಹೀಗಾಗಿ ಬಾಲ್ಯದಿಂದಲೇ ತಂದೆ ತಾಯಿಗಳು ಮಕ್ಕಳನ್ನು ಭಯದಿಂದ ಮುಕ್ತರಾಗಿ ಬೆಳೆಯುವಂತೆ ಪ್ರೇರಣೆ ನೀಡಬೇಕು. ದೆವ್ವ, ಭೂತ, ಪಿಶಾಚಿಯ ಕಲ್ಪನೆಗಳನ್ನು ಬೆಳೆಸಲೇ ಕೂಡದು. ಕತ್ತಲೆ ಭಯ, ನೀರಿನ ಭಯ ಯಾವುದೇ ಭಯವಿದ್ದರೂ ಅದನ್ನು ಬೇರು ಸಮೇತ ಕಿತ್ತೆಸೆಯಲು ಪ್ರಯತ್ನಿಸಬೇಕು. ಬಲಹೀನತೆ ಪ್ರಾರಂಭವಾಗೋದೇ ಭಯದಿಂದ. ಹೀಗಾಗಿ ನಿರ್ಭಯದಿಂದ ಬಾಳುವುದನ್ನು ಹೆತ್ತವರು ಕಲಿಸಬೇಕು.

ಭಯ ಭ್ರಾಂತಿಗೆ ಸಿಲುಕಿಸುತ್ತದೆ : 
ಕ್ರಿಯೆ ಇಲ್ಲದ ನಂಬಿಕೆ ಭ್ರಾಂತಿ . ನಂಬಿಕೆ, ಪವಾಡಕ್ಕಾಗಿ ಕಾಯುವುದಿಲ್ಲ. ಒಮ್ಮೆ ಮನಸು ಬಲಹೀನಗೊಂಡರೆ ಮುಗಿಯಿತು. ದುರ್ಬಲ ಮನಸು ಅತಿರೇಕವೆನಿಸುವಷ್ಟು ಭಯಗೊಂಡು ಭ್ರಾಂತಿಗೆ ಸಿಲುಕಿಕೊಳ್ಳುತ್ತದೆ. ವಾಸ್ತವತೆಯ ಅರಿವನ್ನೇ ಕಳೆದುಕೊಂಡುಬಿಡುತ್ತದೆ. ಯಾವುದೇ ವಾಸ್ತವತೆಗಿಂತ ನಾವು ಅದರ ಬಗ್ಗೆ ಹೊಂದಿರುವ ಮನೋಭಾವ ಮುಖ್ಯವಾಗಿದೆ. ಏಕೆಂದರೆ ಅದೇ ನಮ್ಮ ಸಫಲತೆಯನ್ನು ಮತ್ತು ವಿಫಲತೆಯನ್ನು ನಿರ್ಣಯಿಸುತ್ತದೆ ಎನುವುದು ನಾರ್ಮನ್ ನ್ಸೆಂಟ್ ಪೀಲ್ ಅನುಭವದ ಮಾತು. ವಾಸ್ತವ ಪ್ರಪಂಚದಿಂದ ದೂರ ನಡೆಯಲು ಪ್ರಾರಂಭ ಮಾಡಿದರೆ ಸಾಕು ಗೆಲುವು ದೂರ ದೂರ ಸರಿಯುತ್ತದೆ. ಆಗ ಸೋಲನ್ನೇ ಹಾಸಿ ಹೊದ್ದು ಮಲಗಬೇಕಾಗುತ್ತದೆ. ಈ ಸೋಲು ಕಾಡಿ ಜೀವ ಹಿಂಡುವುದು. ಇಂಥ ಸಂದರ್ಭದಲ್ಲಿ ಮನುಷ್ಯ ಮಾನಸಿಕ ದೃಢÀತೆಯನ್ನು ಗಳಿಸಿಕೊಳ್ಳಲು ಹೊರಟರೆ ಬಲಹೀನತೆ ಪದೇ ಪದೇ ಅಡ್ಡಗಾಲು ಹಾಕುತ್ತದೆ. ಹಾಗಂತ ಪ್ರಯತ್ನ ಬಿಡುವ ಹಾಗಿಲ್ಲ. ದೇಹಕ್ಕೆ ಉತ್ತಮ ಆಹಾರ ಹೇಗೆ ಬೇಕೋ ಹಾಗೆ ಮನಸ್ಸಿಗೆ ಉತ್ತಮ ವಿಚಾರಗಳನ್ನು ಉಣಿಸಬೆಕು.

ಬಲಹೀನತೆಯನ್ನು ಕೊಡವಿ ಎದ್ದು ನಿಂತರೆ : 

ನಿಮ್ಮ ಶಕ್ತಿ ಯಾವುದು, ಬಲಹೀನತೆಗಳೇನು, ನೀವೇನು ಮಾಡಬಾರದು ಮತ್ತು ಮಾಡಬಲ್ಲಿರಿ ಎಂಬುದನ್ನು ಮನಗಾಣಿರಿ. ಜಯಶಾಲಿಗಳು ತಮ್ಮ ಶಕ್ತಿ ಬಲಹೀನತೆಗಳನ್ನು ಅರಿತು ನಡೆದುದಕ್ಕೆ ಜಯ ಸಾಧಿಸಿದರು ಎನ್ನುವುದು ನೆನಪಿನಲ್ಲಿರಲಿ.   ಒಮ್ಮೆ ಮನಸ್ಸು ಗಟ್ಟಿ ಮಾಡಿ ಬಲಹೀನತೆಯನ್ನು ಕೊಡವಿ ಎದ್ದು ನಿಂತರೆ ಸಾಕು. ಬೇಕಾದ ರೀತಿಯಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ಸಾಮಥ್ರ್ಯ, ಪ್ರತಿಭೆ, ಚತುರತೆ ಇದ್ದೆ ಇರುತ್ತದೆ. ಎಂಥದೆ ಅಸಹನೀಯ ಕಷ್ಟ ಪರಿಸ್ಥಿತಿ ಇದ್ದಾಗಲೂ ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುವ ತಾಕತ್ತು ನೀಡುವುದು ಮಾನಸಿಕ ದೃಢತೆ ಮಾತ್ರ.

+


ಒಮ್ಮೆ ನಿಮ್ಮ ಅಂತರಂಗದ ಚೈತನ್ಯ ಅರಿವು ಮೂಡಿದರೆ ಸಾಕು ಹಿಂದೆ ಬೀಳುವ ಮಾತೇ ಇಲ್ಲ. ಅಂತರಂಗದ ಬಲಹೀನತೆಯನ್ನು ದಾಟಿ, ಎದ್ದು ನಿಲ್ಲಬೇಕೆಂದು ದೃಢ ನಿರ್ಧಾರ ಮಾಡಿ. ಪ್ರಯತ್ನಿಸಿದರೆ ಸಾಕು ವಾಸ್ತವ ಲೋಕಕ್ಕೆ ಮರಳಿ ನಿರುತ್ಸಾಹದ ಮುದ್ದೆಯಂತಿದ್ದವನು ಚಿಮ್ಮುವ ಚಿಲುಮೆಯಾಗುತ್ತಾನೆ.
ಗುಣಮಟ್ಟದ ಕೆಲಸ ಸಾಧ್ಯ  ಒಮ್ಮೆ ಮಾನಸಿಕ ದೃಢತೆಯನ್ನು ಸಾಧಿಸಿದರೆ ಅದು ಸಮಯದ ಸದುಪಯೋಗವನ್ನು ತಾನಾಗಿಯೇ ಅರಿತು ರೂಢಿಸಿಕೊಳ್ಳುವಂತೆ ಮಾಡುತ್ತದೆ. ಕೆಲಸದ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬಲಹೀನ ವ್ಯಕ್ತಿ ಮಾಡುವ ಕೆಲಸಕ್ಕಿಂತ ಹೆಚ್ಚು ಕೆಲಸವನ್ನು ಅದೇ ಸಮಯದಲ್ಲಿ ದೃಢತೆ ಸಾಧಿಸಿದವನು ಮಾಡಿ ಮುಗಿಸುವನು. ಏಕೆಂದರೆ ಬಲಹೀನತೆಯಲ್ಲಿ ತೊಳಲಾಡುವ ವ್ಯಕ್ತಿಯು ಚಿತ್ತ ಚಾಂಚಲ್ಯದಿಂದ ಕೂಡಿರುತ್ತದೆ. ಅವನಿಗೆ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ದೃಢತೆಯುಳ್ಳವನ ಕೆಲಸದಲ್ಲಿ ಗುಣಮಟ್ಟ ಎದ್ದು ಕಾಣುವುದಲ್ಲದೆ ಅವರ ಸಕಾರಾತ್ಮಕ ಧೋರಣೆ ಇತರರ ನಡುವೆ ಎದ್ದು ಕಾಣುವಂತೆ ಮಾಡುತ್ತದೆ. ಸಮಾಜ ದೃಢತೆಯುಳ್ಳವನನ್ನು ಗುರುತಿಸಿ ಗೌರವಿಸುತ್ತದೆ.

ವಿವೇಕದಿಂದ ಸಮಸ್ಯೆ ಪರಿಹಾರ : 

ಅಧೈರ್ಯವಾದರೆ ಕಷ್ಟಗಳು ನಮ್ಮನ್ನು ಬಿಡದ ಭೂತದಂತೆ ಕಾಡುತ್ತವೆ. ಧೈರ್ಯ ತಾಳಿದರೆ ತಾವಾಗಿಯೇ ಓಡುತ್ತವೆ. ಭಯದ ಕ್ಷಣಗಳು ಎದುರಾದಾಗ ಮೈ ಮರೆತರೆ ಸಾಕು ಬಲಹೀನತೆ ಬಲವಾಗಿ ವಕ್ರಿಸಿಕೊಳ್ಳುತ್ತದೆ. ಕಾರಣ ಭಯದ ಕ್ಷಣದಲ್ಲಿ ಮನಸ್ಸನ್ನು ಉದ್ವೇಗಕ್ಕೆ, ಆತಂಕಕ್ಕೆ ಎಡೆ ಮಾಡದೇ ಮನಸ್ಸನ್ನು ಉದ್ವೇಗ ರಹಿತ ಸ್ಥಿತಿಯಲ್ಲಿಟ್ಟುಕೊಂಡು ಯೋಚಿಸಿದಾಗ ಸಮಸ್ಯೆ ದೊಡ್ಡದಾಗಿ ಕಾಣುವುದಿಲ್ಲ. ವಿವೇಕದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮರ್ಕಟ ಮನಸ್ಸು ಹೇಳುವುದನ್ನು ಮಾಡುವುದಕ್ಕಿಂತ ಬುದ್ಧಿ ಹೇಳುವುದನ್ನೇ ಪಾಲಿಸಬೇಕು.

ದೃಢತೆಯಿಂದ ಜಯ : 

ಬಲಹೀನತೆ ಇದ್ದವನ ಬಳಿ ಜಯ ಹತ್ತಿರವೂ ಸುಳಿಯುವುದಿಲ್ಲ. ಬಲಹೀನತೆಯ ಮನಸ್ಥಿತಿಯಲ್ಲಿ ನಕಾರಾತ್ಮಕತೆಯೇ ರಾರಾಜಿಸುತ್ತದೆ. ನಕಾರಾತ್ಮಕವಾದ ನನ್ನಿಂದಾಗದು ಎಂಬ ಭಾವವನ್ನು ತೊರೆದು ಹೊರಗೆ ಬನ್ನಿ. ಜಗವೇ ಸುಂದರವಾಗಿ ಕಂಗೊಳಿಸುವುದು. ನಾನು ಬಡವ ನನ್ನಷ್ಟು ಕಷ್ಟದಲ್ಲಿ ಯಾರೂ ಇಲ್ಲ ಎಂದು ಕೊರಗಬೇಡಿ.  ನಿಮಗಿಂತ ಹೆಚ್ಚಿನ ಕಷ್ಟದಲ್ಲಿದ್ದರ ಏನೇನ್ನನ್ನೊ ಸಾಧಿಸಿದವರನ್ನು ಮಾದರಿಯಾಗಿಟ್ಟುಕೊಳ್ಳಿ. ಸಂತೋಷ ಹೊರಗೆಲ್ಲಿಯೂ ದೊರೆಯುವುದಿಲ್ಲ. ಅದು ನಿಮ್ಮ ಆಯ್ಕೆ. ನಿಮ್ಮ ಬಳಿಯೇ ಇದೆ.   ಒಂದು ಬಾರಿ ನಿಮ್ಮ ಸಂತೋಷ ಯಾವುದರಲ್ಲಿದೆ ಎಂದು ಕಂಡುಕೊಂಡರೆ ಸಾಕು. ದುಃಖದ ಸಹವಾಸ ಮರೆತು ಬಿಡುತ್ತೀರಿ. ಸಂತಸದ ಸಂಪರ್ಕದಲ್ಲಿ ದುಃಖ, ಚಿಂತೆ, ಬೇಸರಗಳಿಗೆ ಜಾಗವೇ ಇರುವುದಿಲ್ಲ.

ಕೀಳರಿಮೆ, ದುಃಖ, ಭಯ, ಚಿಂತೆ, ಬೇಸರ, ಸೋಮಾರಿತನದಂತಹ ನಕಾರಾತ್ಮಕ ಭಾವಗಳನ್ನು ಒಂದು ಬಾರಿ ದೃಢ ಮನಸ್ಸಿನಿಂದ ಒದ್ದು ಓಡಿಸಿಬಿಡಿ. ಆಗ ನೋಡಿ. ಜೀವನವೆಲ್ಲ ಸಕಾರಾತ್ಮಕವಾಗಿ ಸಂತಸ ಮನೆ ಮಾಡುತ್ತದೆ. ದುಃಖವನ್ನು ದೂರ ತಳ್ಳಿ ಮನಸಾರೆ ನಕ್ಕು ಬಿಡಿ. ಮನದ ಗೊಂದಲಗಳಿಗೆಲ್ಲ ಸಕಾರಾತ್ಮಕ ಮನೋಭಾವನೆ ಉತ್ತರಿಸುವುದು.  ಮಾನಸಿಕ ದೃಢತೆಯನ್ನು ಸಾಧಿಸಿದರೆ ನಿಮ್ಮ ಸಂತೋಷ ಸಂತೃಪ್ತಿ ಸಮೃದ್ಧಿಗೆ ಕೊನೆಯೇ ಇಲ್ಲ. ನಕಾರಾತ್ಮಕತೆಯನ್ನು ದೂರ ತಳ್ಳಿ ದೃಢತೆಯನ್ನು ಅಪ್ಪಿಕೊಳ್ಳಿ. ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ.

ಜಯಶ್ರೀ ಜೆ.ಅಬ್ಬಿಗೇರಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin