ನಟೋರಿಯಸ್ ರೌಡಿ ಕರಿಚಿರತೆ @ ಮಲ್ಲಿಕಾರ್ಜುನ್ ಬಡಿಗೇರ್ ಎನ್‍ಕೌಂಟರ್‍’ಗೆ ಬಲಿ

EKari-Chirate--mallikarjun

ಕಲಬುರಗಿ, ಆ.1-ಅಪಹರಣ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ತಲೆ ಮರೆಸಿಕೊಂಡಿದ್ದ ನಟೋರಿಯಸ್ ರೌಡಿ ಕರಿ ಚಿರತೆ ಅಲಿಯಾಸ್ ಮಲ್ಲಿಕಾರ್ಜುನ್ ಬಡಿಗೇರ್ ಬೆಳ್ಳಂಬೆಳಗ್ಗೆ ಪೊಲೀಸ್ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದಾನೆ. ಕಲಬುರಗಿ ಕೆಸರಟಗಿ ಬಳಿಯ ನಾಗೇನಹಳ್ಳಿ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮಲ್ಲಿಕಾರ್ಜುನ್‍ನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡು ಮಲ್ಲಿಕಾರ್ಜುನ್‍ಗೆ ತಗುಲಿ ತೀವ್ರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ ಸೇರಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಇವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮಲ್ಲಿಕಾರ್ಜುನ್‍ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಎಸ್‍ಪಿ ಶಶಿಕುಮಾರ್ ಅವರು ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕೈಗೆ ಗುಂಡು ತಗುಲಿದೆ.  ಕಾರ್ಯಾಚರಣೆ ವೇಳೆ ಬುಲೆಟ್‍ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಹುಲ್ಲೂರು ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ಇಬ್ಬರು ಸಿಬ್ಬಂದಿ ಕೈಗಳಿಗೆ ಗಾಯವಾಗಿದೆ.

ಹಿನ್ನೆಲೆ: ಕಲಬುರಗಿಯ ಕುಖ್ಯಾತ ರೌಡಿ ಮಲ್ಲಿಕಾರ್ಜುನ್ ಬಡಿಗೇರ್ ಜು.7ರಂದು ನಂದೂರು ಗ್ರಾಮದ ಲಕ್ಷ್ಮಿಕಾಂತ್ ಎಂಬುವರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ. ಈತನ ಮೇಲೆ ರೌಡಿಶೀಟರ್, ಗೂಂಡಾ ಆ್ಯಕ್ಟ್ ಮತ್ತು ಕೋಕಾ ಕಾಯ್ದೆ ಬಳಕೆ ಮಾಡಿದರೂ ಸಹ ಈತ ಮಾತ್ರ ಹೆದರಿಕೆ ಇಲ್ಲದವನಂತೆ ಹಾಡಹಗಲೇ ಕಿಡ್ನ್ಯಾಪ್, ಕೊಲೆ ಮಾಡಿ ತಲೆಮರೆಸಿಕೊಂಡು ಪೊಲೀಸರಿಗೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದ. ನಗರದ ಹೊರವಲಯದ ಕೆಸರಟಗಿ ಬಳಿಯ ಆಶ್ರಯ ಕಾಲೋನಿಯಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಮಲ್ಲಿಕಾರ್ಜುನ್ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಆತನಿಗೆ ತಗುಲಿದ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಕರಿ ಚಿರತೆ ಎನ್‍ಕೌಂಟರ್‍ನಿಂದ ಕಲುಬರಗಿ ಜನತೆ ನಿಟ್ಟುಸಿರು ಬಿಡುವಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin