ನಟ ಜಗ್ಗೇಶ್ ಪುತ್ರ ಗುರುರಾಜ್ ಗೆ ಚೂರಿ ಇರಿತ
ಬೆಂಗಳೂರು, ಆ.14-ಮಗನನ್ನು ಶಾಲೆಯಿಂದ ಕರೆದುಕೊಂಡು ಬರುವ ವೇಳೆ ಟ್ರಾಫಿಕ್ ವಿಷಯದಲ್ಲಿ ಉಂಟಾದ ಜಗಳದಲ್ಲಿ ಚಿತ್ರನಟ ಜಗ್ಗೇಶ್ ಅವರ ಪುತ್ರ ಹಾಗೂ ನಟ ಗುರುರಾಜ್ಗೆ ದುಷ್ಕರ್ಮಿಗಳು ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಆರ್.ಟಿ.ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಗುರುರಾಜ್ ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಮ್ಮ ಮಗುವನ್ನು ಶಾಲೆಯಿಂದ ಕಾರಿನಲ್ಲಿ ಕರೆದುಕೊಂಡು ಬರುವ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆಯಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ಗುರುರಾಜ್ ಮೇಲೆ ದಾಳಿ ನಡೆಸಿ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ಸಂಬಂಧ ಈಗಾಗಲೇ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಶುಕ್ರವಾರ ತೆರೆ ಕಂಡ ಶಿವರಾಜ್ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಗುರುರಾಜ್ ಕಾಣಿಸಿಕೊಂಡಿದ್ದಾರೆ.