‘ನಮಗೆ ತಿಂಡಿ ಬೇಡ, ಊಟ ಬೇಡ ಬೇಡಿಕೆಗಳನ್ನು ಈಡೇರಿಸಿ’

Kumaraswamy-JDS

ಬೆಂಗಳೂರು, ಮಾ.21- ಯಾವ ರಾಜಕಾರಣಿಗಳು ಬಂದು ಏನು ಹೇಳೋದೂ ಬೇಡ… ಏನು ಕೊಡಿಸೋದು ಬೇಡ… ನಮ್ಮ ಸಮಸ್ಯೆ ಬಗೆಹರಿಯಬೇಕು… ಪ್ರತಿಭಟನೆಯಲ್ಲಿ ನನಗೆ ಏನು ತೊಂದರೆಯಾದರೂ ನಾವು ಅನುಭವಿಸುತ್ತೇವೆ… ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದು ಕುಳಿತಿದ್ದಾರೆ.  ಫ್ರೀಡಂಪಾರ್ಕ್‍ನಲ್ಲಿ ನಡೆಸುತ್ತಿರುವ ವೇತನ ಹೆಚ್ಚಳ ಹಾಗೂ ಸೇವಾ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ, ಹಲವು ಶಾಸಕರು, ಮಾಜಿ ಸಚಿವರು ಭೇಟಿ ನೀಡಿ ಊಟ-ತಿಂಡಿ ಕೊಡಿಸುವ ಭರವಸೆ ನೀಡಿರುವುದನ್ನು ತಿರಸ್ಕರಿಸಿರುವ ಪ್ರತಿಭಟನಾನಿರತ ಕಾರ್ಯಕರ್ತೆಯರು ನಮಗೆ ಈ ಸೌಲಭ್ಯ ಬೇಡ. ನಮ್ಮ ಬೇಡಿಕೆಗಳನ್ನು ಮೊದಲು ಈಡೇರಿಸಿ ಎಂದು ಹೇಳಿದ್ದಾರೆ. ಸಂಕಷ್ಟದ ನಡುವೆ ಸ್ವಾಭಿಮಾನ ಮೆರೆದಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, 10ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.  ಎಳೆಯ ಮಕ್ಕಳೊಂದಿಗೆ ರಸ್ತೆಯಲ್ಲೇ ಮಲಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಮಂಜುಳಾ, ಸುನಂದಾ ಎಂಬುವರು ತೀವ್ರ ಅಸ್ವಸ್ಥರಾಗಿದ್ದು, ಇವರನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.  ರಾಜ್ಯದ ವಿವಿಧೆಡೆಯಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಫ್ರೀಡಂಪಾರ್ಕ್‍ನಲ್ಲಿ ಧರಣಿ ನಿರತರಾಗಿದ್ದು, ರಸ್ತೆ ಬದಿಗಳಲ್ಲೇ ಮಲಗಿ ರಾತ್ರಿ ಕಳೆದಿದ್ದಾರೆ.

 

Tumakuru--05

ಕಳೆದ 26 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದು, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಬೇಡಿಕೆ ಈಡೇರಿಕೆಗೆ ಬಿಗಿ ಪಟ್ಟು ಹಿಡಿದಿದ್ದಾರೆ.  ಏನಾದರೂ ಸರಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕು. ಕೇವಲ ಅಷ್ಟೊ ಇಷ್ಟೊ ಗೌರವ ಧನ ಹೆಚ್ಚಳ ಮಾಡಿ ನಮ್ಮನ್ನು ಸಾಗುಹಾಕುವ ಪ್ರವೃತ್ತಿಗೆ ನಾವು ಮಣೆ ಹಾಕುವುದಿಲ್ಲ. ನಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.  ಉತ್ತರ ಕರ್ನಾಟಕದ ಬೀದರ್, ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಮ್ಮ ಮಕ್ಕಳು-ಮರಿಗಳೊಂದಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ತಾವು ತಂದಿದ್ದ ರೊಟ್ಟಿ ಬುತ್ತಿಯನ್ನು ಬಿಚ್ಚಿ ಬೆಳಗ್ಗೆ ತಿನ್ನುತ್ತಿದ್ದುದು ಕಂಡುಬಂತು.

 

Anganawadi--02

ನಮಗೆ ಯಾವುದೇ ವ್ಯವಸ್ಥೆ ಬೇಡ. ನಮ್ಮ ಬೇಡಿಕೆಗಳ ಈಡೇರಿಕೆ ಮಾಡಿಕೊಡಿ ಎಂದು ಅಲವತ್ತುಕೊಂಡಿದ್ದಾರೆ.   ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಈ ಪ್ರತಿಭಟನೆ ಸದ್ದು ಮಾಡುವ ಸಾಧ್ಯತೆ ಇದೆ.  ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀಯವರು ಮುಖಂಡರೊಂದಿಗೆ ಮಾತುಕತೆ ನಡೆಸಿದರಾದರೂ ಫಲ ನೀಡಲಿಲ್ಲ. ರಾಜ್ಯ ಸರ್ಕಾರ ಸಾಕಷ್ಟು ಹಣವನ್ನು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡುತ್ತಿದೆ. ಕೇಂದ್ರ ಸರ್ಕಾರ ಕಡಿಮೆ ಹಣ ನೀಡುತ್ತಿದೆ. ನೀವು ಪ್ರತಿಭಟನೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕು ಎಂದು ಹೇಳಿದ್ದಾರೆ.

ಇವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ಆಗ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‍ನಲ್ಲಿ 1 ಸಾವಿರ ರೂ. ಹೆಚ್ಚಳ ಮಾಡುವ ಪ್ರಸ್ತಾಪ ಮಾಡಿದ್ದೇನೆ. ಪರಿಶೀಲಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತೇನೆ ಎಂದು ಹೇಳಿ ಯಾವುದೇ ಖಚಿತ ಭರವಸೆ ನೀಡದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಇಂದು ಕೂಡ ಪ್ರತಿಭಟನಾ ಸ್ಥಳಕ್ಕೆ ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಗಮಿಸುವ ನಿರೀಕ್ಷೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Tumakuru--06

Tumakuru--04

Anganawadi--03

Anganawadi--01

Sri Raghav

Admin