ನಮ್ಮ ಮೆಟ್ರೋ ಮಾರ್ಗ ಮತ್ತಷ್ಟು ವಿಸ್ತರಣೆ ಮಾಡಲು ತೀರ್ಮಾನ
ಬೆಂಗಳೂರು, ಅ.20- ಮೆಟ್ರೋ ರೈಲನ್ನು ಮತ್ತಷ್ಟು ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ. ಅಗತ್ಯತೆ ಗಮನಿಸಿ ಮೆಟ್ರೋ ಮಾರ್ಗವನ್ನು ವಿಸ್ತರಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಮೆಟ್ರೋ ರೈಲು ಮಾರ್ಗವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯತೆ ಇದೆ. ಸದ್ಯ ನಡೆಯುತ್ತಿರುವ ಕಾಮಗಾರಿ ಮುಂದುವರೆದಿದ್ದು, ಇನ್ನಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸಂಬಂಧ 2014ರ ಬಜೆಟ್ನಲ್ಲಿ ಘೋಷಿಸಲಾಗಿದ್ದು, ಸಂಚಾರದಟ್ಟಣೆ ಕಡಿಮೆ ಮಾಡಲು ಸರ್ಕಾರ ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ.
ಸ್ಟೀಲ್ ಬ್ರಿಡ್ಜ್ ಬಗ್ಗೆ ಅಪಸ್ವರವೆತ್ತಿರುವ ಶಾಸಕ ಸುರೇಶ್ಕುಮಾರ್ ಕ್ಷೇತ್ರದಲ್ಲಿ ಹಲವು ಫ್ಲೈಓವರ್ಗಳಾಗಿದ್ದರೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಮುಂಬರುವ ಸಿಡಿಪಿ ಸಮಯದಲ್ಲಿ ಟ್ರಿಯರ್ ಪ್ಲ್ಯಾನ್ ಮಾಡಲು ತೀರ್ಮಾನಿಸಿದ್ದು, ಹಸಿರು ವಲಯ ನಿರ್ಮಿಸಲು ಮುಂದಾಗುತ್ತೇವೆ. ಸಾರ್ವಜನಿಕರ ಅಭಿಪ್ರಾಯವಷ್ಟೇ ಅಲ್ಲದೆ, ಸರ್ಕಾರವೂ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.ಸ್ಟೀಲ್ ನಿರ್ಮಾಣಕ್ಕೆ ಸರ್ಕಾರವನ್ನು ಟೀಕೆ ಮಾಡಲೆಂದೇ ಪ್ರತಿಪಕ್ಷಗಳು ವಿರೋಧ ಮಾಡುತ್ತಿವೆ. ಬೇರೆ ಯಾವುದೋ ಸ್ಟೀಲ್ ಬ್ರಿಡ್ಜ್ ತೋರಿಸಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. 2014ರಿಂದಲೂ ಈ ಬ್ರಿಡ್ಜ್ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಅದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.
ಸಂಚಾರ ದಟ್ಟಣೆ ನಿಯಂತ್ರಿಸಲು ಸ್ಟೀಲ್ ಬ್ರಿಡ್ಜ್ ನಿರ್ಮಾಣ ಹೊರತು ಪಡಿಸಿ ಬೇರಾವುದೇ ಪರ್ಯಾಯ ಮಾರ್ಗಗಳಿಲ್ಲ. ಪ್ರಕರಣ ಹೈಕೋರ್ಟ್ನಲ್ಲಿದ್ದು ನ್ಯಾಯಾಲಯದ ತೀರ್ಪಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಸ್ಟೀಲ್ ನಿರ್ಮಾಣದ ಬಳಿಕ ಟೋಲ್ ಸಂಗ್ರಹ ಮಾಡಲಾಗುವುದು. ಇದು ಸರ್ಕಾರದ ಪ್ರಾಜೆಕ್ಟ್ ಆಗಿದ್ದು, ಬಿಡಿಎ ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
► Follow us on – Facebook / Twitter / Google+