ನಾಗರಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಮೈಸೂರು,ಮಾ.19-ಆಹಾರ ಹರಸಿ ನಗರಕ್ಕೆ ಬಂದು ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಕಡೆಗೂ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಸಮೀಪವಿರುವ ನಗರದ ಬೋಗಾದಿಯ ಬಿಇಎಂಎಲ್ ಆವರಣದಲ್ಲಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಇಂದು ಬೆಳಗ್ಗೆ ಚಿರತೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಬೋಗಾದಿ ಸುತ್ತಮುತ್ತಲ ಗ್ರಾಮಗಳು ಹಾಗೂ ಬಿಇಎಂಎಲ್ ಬಳಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಇದುವರೆಗೆ ಯಾವುದೇ ಜಾನುವಾರುಗಳನ್ನು ತಿಂದಿರಲಿಲ್ಲ. ಆಗಾಗ್ಗೆ ಜನರಿಗೆ ಕಾಣಿಸಿಕೊಂಡಿತ್ತು. ಇದರಿಂದ ಸಂಜೆ ಮತ್ತು ಮುಂಜಾನೆ ವಾಯು ವಿಹಾರಕ್ಕೆ ಹೋಗುವವರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ವಿಷಯ ತಿಳಿಸಿದ್ದರು.
15 ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಬೋಗಾದಿ ಸುತ್ತಮುತ್ತ ಪರಿಶೀಲನೆ ನಡೆಸಿ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಬೆಮಲ್ ಆವರಣದಲ್ಲಿ ಬೋನು ಇರಿಸಿ ಬೀದಿ ನಾಯಿಯೊಂದನ್ನು ಕಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ನಾಯಿಯನ್ನು ತಿನ್ನುವ ಆಸೆಯಿಂದ ಬಂದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಿದ್ದು ಅರವಳಿಕೆ ಚುಚ್ಚುಮದ್ದು ನೀಡಿ ವೈದ್ಯಾಧಿಕಾರಿಗಳಿಂದ ಪರಿಶೀಲನೆ ಮಾಡಿಸಿ ಅರಣ್ಯಕ್ಕೆ ಬಿಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
< Eesanje News 24/7 ನ್ಯೂಸ್ ಆ್ಯಪ್ >