ನಾದಬ್ರಹ್ಮ ಡಾ.ಬಾಲಮುರಳಿಗೆ ‘ಅಭಿಮಾನಿ’ ನಮನ

Spread the love

BBBBBBBBBBBBB

ಕೆಲವು ವರ್ಷಗಳ ಹಿಂದೆ ಅಭಿಮಾನಿ ಸಮೂಹದ ಆಶ್ರಯದಲ್ಲಿ ಏರ್ಪಡಿಸಿದ್ದ ಕನಕ-ಪುರಂದರ ನಾದ ನಮನ ಎಂಬ ಕಾರ್ಯಕ್ರಮಕ್ಕೆ ಗಾನ ಗಾರುಡಿಗ ಡಾ.ಎಂ.ಬಾಲಮುರಳಿ ಕೃಷ್ಣ ಅವರು ಆಗಮಿಸಿ ತಮ್ಮ ಕಂಠ ಸಿರಿಯಿಂದ ಸಾವಿರಾರು ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸಿದ್ದರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಅವರು ದಾಸರ ಪದಗಳನ್ನೇ ಹಾಡಿದ್ದು ವಿಶೇಷವಾಗಿತ್ತು.  ನಿನ್ನೆ ವಿಧಿವಶರಾದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಮಂಗಳಂಪಲ್ಲಿ ಬಾಲಮುರಳಿಕೃಷ್ಣ ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿದ್ದರು. ಕಂಚಿನ ಕಂಠದ ಬಾಲಮುರಳಿಯವರಿಗೆ ಸಿನಿಮಾಗಳಿಗೆ ಹಾಡಲು ಒಲವಿರಲಿಲ್ಲ. ಆದರೂ ಆಗಾಗ ಹಾಡುತ್ತಿದ್ದರು. ಕನ್ನಡ ಸಿನಿಮಾಕ್ಕೆ ಅವರ ಕೊಡುಗೆ ದೊಡ್ಡದು.

1975ರಲ್ಲಿ ತೆರೆಕಂಡ ಜಿ.ವಿ.ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರಕ್ಕೆ ಬಾಲಮುರಳಿ ಕೃಷ್ಣ ಸಂಗೀತ ನೀಡಿದ್ದರು. ಜೊತೆಗೆ ಕೆಲವು ಗೀತೆಗಳನ್ನು ಹಾಡಿದ್ದರು. ಅವರು ಹಾಡಿದ ಹಿಮಾದ್ರಿಸುತೆ ಪಾಹಿಮಾಂ ಎಂಬ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂತು. ಚಿತ್ರಕ್ಕೆ ಕೂಡ ರಾಷ್ಟ್ರ ಪ್ರಶಸ್ತಿ ಬಂತು. ಜಿ.ವಿ.ಅಯ್ಯರ್ ನಿರ್ದೇಶಿಸಿದ ಮಧ್ವಾಚಾರ್ಯ ಎಂಬ ಚಿತ್ರಕ್ಕೂ ಬಾಲಮುರಳಿಯವರದೇ ಸಂಗೀತ. ಆ ಚಿತ್ರದ ರಾಗ ಸಂಯೋಜಕರಾಗಿ ಅವರಿಗೆ ನ್ಯಾಷನಲ್ ಅವಾರ್ಡ್ ಬಂತು. ಅಯ್ಯರ್ ಅವರ ಆದಿ ಶಂಕರಾಚಾರ್ಯ, ಭಗವದ್ಗೀತಾ, ರಾಮಾನುಜಾಚಾರ್ಯ ಹಾಡುಗಳು ನನಗೆ ಪರಮ ಪ್ರಿಯ ಎಂದು ಅವರು ಆಗಾಗ ಹೇಳುತ್ತಿದ್ದರು.
ಬಾಲಮುರಳಿಯವರು ಸಿನಿಮಾಗಳಿಗೆ ಹಾಡಿದ್ದು ವಿರಳ. ಆದರೂ ಅವು ಜನಮಾನಸದಲ್ಲಿ ನೆಲೆಗೊಂಡಿವೆ. ನಟವರ ಗಂಗಾಧರ, ಜಯಜಯ ಜಗದೀಶ, ಈ ಪರಿಯ ಸೊಬಗು, ನಂಬಿದೆ ನಿನ್ನ ನಾದ ದೇವತೆಯೆ, ಏನು ಮಾಡಿದರೇನು ಭವ ಹಿಂಗದು, ನಾ ನಿನ್ನ ಧ್ಯಾನದೊಳಿರಲು, ಇಂದು ಎನಗೆ ಗೋವಿಂದ, ಋತುಗಾನ, ನವ ಋತುಮಾನ ಎಂಬ ಹಾಡುಗಳನ್ನು ಉಲ್ಲೇಖಿಸಬಹುದು.

ಮತ್ತೊಂದು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಮುತ್ತಿನ ಹಾರಕ್ಕೆ ಹಂಸಲೇಖ ಅವರು ದೇವರು ಹೊಸೆದ ಪ್ರೇಮದ ದಾರ ಎಂಬ ಅದ್ಭುತ ಹಾಡನ್ನು ಕಂಪೋಸ್ ಮಾಡಿದರು. ಅದು ಋತುಗಳನ್ನು ಬಿಂಬಿಸುವ ಹಾಡಿದು. ಇದನ್ನು ಅಸಾಮಾನ್ಯ ಗಾಯಕರೊಬ್ಬರು ಹಾಡಿದರೆ ಚೆನ್ನ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಮತ್ತು ಹಂಸಲೇಖ ನಿರ್ಧರಿಸಿ, ಬಾಲಮುರಳಿಯವರನ್ನು ಸಂಪರ್ಕಿಸಿದರು. ನಾನು ಹಾಡೊಲ್ಲ ಎಂಬ ಉತ್ತರ ಬಂತು. ಅಷ್ಟಕ್ಕೆ ಸುಮ್ಮನಾಗದ ರಾಜೇಂದ್ರಸಿಂಗ್ ಅವರು ಚೆನ್ನೈಗೆ ಹೋಗಿ ಬಾಲಮುರಳಿಯವರನ್ನು ಭೇಟಿ ಮಾಡಿ ಚಿತ್ರದ ಕಥೆ, ಹಾಡಿನ ಸನ್ನಿವೇಶವನ್ನು ವಿವರಿಸಿದರು. ಕೊನೆಗೆ ಇದನ್ನು ಹಾಡಲು ಬಾಲಮುರಳಿ ಸಮ್ಮತಿಸಿದರು. ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್. ರಾತ್ರಿ ಹತ್ತಕ್ಕೆ ಪ್ರಾರಂಭವಾದ ಗಾಯನ ಬೆಳಗಿನ ಜಾವದವರೆಗೂ ನಡೆಯಿತು. ಅಷ್ಟರ ಮಟ್ಟಿನ ತಲ್ಲೀನತೆಯಿಂದ ಈ ಕ್ಲಿಷ್ಟಕರ ಹಾಡನ್ನು ಅವರು ಹಾಡಿದರು.

ಅಂತಹ ಮಹಾನುಭಾವರಿಂದ ಹಾಡಿಸುವ ದೊಡ್ಡ ಕನಸು ನನಗಿತ್ತು. ಅದರಲ್ಲಿ ನಾಲ್ಕು ಬ್ಲಾಕ್ ಇತ್ತು. ಒಂದೊಂದು ಬ್ಲಾಕ್ನಲ್ಲಿ ಒಂದೊಂದು ರಾಗ. ಈ ಗೀತೆ ಯನ್ನು ಹಾಡಲು ಸ್ಟುಡಿಯೋಗೆ ಬಂದ ಬಾಲಮುರಳಿಯವರು, ನೀವು ನನಗೆ ಇಂತಹ ಪರೀಕ್ಷೆ ಕೊಡ್ತೀರ ಅಂತ ನನಗೆ ಗೊತ್ತಿತ್ತು ಎಂದು ಹೇಳಿದರು- ನಾನು ನಿರೀಕ್ಷಿಸಿದ್ದಕ್ಕಿಂತ ಚೆನ್ನಾಗಿ ಹಾಡಿದರು. ಹಾಡಿನ ಕಟ್ಟುವಿಕೆ ಬಗ್ಗೆ ಮಾತನಾಡಿ ಸಂತೋಷ ಪಟ್ಟರು. ದೇವರು ಹೊಸೆದ ಪ್ರೇಮದ ಹಾರ ಎಂಬ ಈ ಹಾಡು ಅವರ ಪಾದಕ್ಕೆ ಸಮರ್ಪಣೆ ಎಂದು ಹಂಸಲೇಖ ಹೇಳಿದರು.

ಅಭಿಮಾನಿ ಸಮೂಹವು ಏರ್ಪಡಿಸುವ ಕನಕ-ಪುರಂದರ ನಾದ ನಮನ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ ಬಾಲಮುರಳಿ ಕೃಷ್ಣ ಅವರು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.  ಸುಮಾರು ಎರಡೂವರೆ ಗಂಟೆಯ ಸಂಗೀತ ಕಾರ್ಯಕ್ರಮದುದ್ದಕ್ಕೂ ನೀವು ದಾಸರ ಪದಗಳನ್ನು ಮಾತ್ರ ಹಾಡಬೇಕು ಎಂದು ಅವರಿಗೆ ಮುಂಚಿತವಾಗಿಯೇ ಮನವಿ ಮಾಡಲಾಗಿತ್ತು.
ದೇಶ-ವಿದೇಶದ ಯಾವುದೇ ಭಾಗದಲ್ಲಿ ಕಚೇರಿ ನೀಡಿದರೂ ಅಲ್ಲಿ ನಾನು ತಪ್ಪದೆ ದಾಸರ ಪದ ಹಾಡುತ್ತೇನೆ. ಆದರೆ, ಹೀಗೆ ಕಾರ್ಯಕ್ರಮದುದ್ದಕ್ಕೂ ದಾಸರ ಪದ ಹಾಡುವ ಅವಕಾಶ ಸಿಕ್ಕಿರಲಿಲ್ಲ ಎಂದು ಹೇಳಿದ ಅವರು, ಹಾಡುಗಳ ಆಯ್ಕೆ ಮಾಡಿಕೊಂಡು ಬಂದು ಹಾಡಿದರಲ್ಲದೆ, ಇದು ನನ್ನ ಬದುಕಿನ ಚಿರಸ್ಮರಣೀಯ ಕಾರ್ಯಕ್ರಮ ಎಂದು ತಿಳಿಸಿದರು. ಆ ಮಹಾನ್ ಚೇತನಕ್ಕೆ ಭಕ್ತಿಪೂರ್ವಕ ನಮನ.

Facebook Comments

Sri Raghav

Admin