‘ನಾನು ಅಧಿಕಾರಕ್ಕೇರಲು ಯಾರಿಗೂ ಹಣ ಕೊಟ್ಟಿಲ್ಲ’ : ಪರಮೇಶ್ವರ್

parmeshwara

ಮೈಸೂರು, ಏ.7-  ನಾನು ಅಧಿಕಾರಕ್ಕೇರಲು ಯಾರಿಗೂ ಹಣ ಕೊಟ್ಟಿಲ್ಲ. ಹಣ ಕೊಡುವ ಮನಸ್ಥಿತಿಯವನು ನಾನಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಶ್ರೀನಿವಾಸ್‍ಪ್ರಸಾದ್ ಅವರು, ತಮ್ಮ ಮನೆಗೆ ಬಂದು ಅಧಿಕಾರ ಕೊಡಿಸಿ ಎಂದು ಪರಮೇಶ್ವರ್ ಹಣ ತಂದಿದ್ದರು ಎಂಬ ಆರೋಪ ಮಾಡಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅಂತಹ ವ್ಯಕ್ತಿ ನಾನಲ್ಲ. ಅವರ ಮನೆಗೆ ಹಣ ತೆಗೆದುಕೊಂಡು ಹೋಗಿರುವುದೇ ಆದಲ್ಲಿ ಅವರ ಮನೆಯಲ್ಲಿ ಅಳವಡಿಸಿರುವ ಸಿಸಿ ಟಿವಿಯ ದಾಖಲೆಗಳಿದ್ದರೆ ತೋರಿಸಲಿ ವಿನಾಃಕಾರಣ ಆರೋಪ ಮಾಡಬಾರದು. ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಬಾರದು ಎಂದರು.

ನಾನು ಅವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಬಹುದು. ಆದರೆ, ಅದು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯು ಮುಖ್ಯಮಂತ್ರಿ ಹಾಗೂ ನನಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ. ನಾನು ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಹಾಗಾಗಿ ಪಕ್ಷ ಹಾಗೂ ರಾಜ್ಯಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದರು.ಪಕ್ಷ ಮತ್ತು ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯೇ ಹೊರತು ನನಗಾಗಲಿ, ಸಿಎಂಗಾಗಲಿ ವೈಯಕ್ತಿಕವಾಗಿ ಅಲ್ಲ. ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಸ್ಪಷ್ಟಪಡಿಸಿದರು.

ಕಳೆದ 15 ದಿನಗಳಿಂದ ಇಲ್ಲಿ ಸರ್ವೆ ಮಾಡಿದ್ದೇನೆ. ಶ್ರೀನಿವಾಸ್‍ಪ್ರಸಾದ್ ಅವರು ಈ ಭಾಗದಲ್ಲಿ ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುದು ಹೇಳುತ್ತಿಲ್ಲ. ಆದರೆ, ಅವರು ಶಾಸಕ ಸ್ಥಾನ ತೊರೆದು ಕಾಂಗ್ರೆಸ್ ಬಿಟ್ಟ ನಂತರ ಪಕ್ಷ ಈ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳನ್ನು ನಡೆಸಿದೆ. ಜನ ಅಭಿವೃದ್ಧಿ ಬಯಸುತ್ತಾರೆ. ನಾವು ಅದನ್ನ ಮಾಡುತ್ತಿದ್ದೇವೆ. ಆಡಳಿತ ಪಕ್ಷದ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಅವರು ಅಭಿವೃದ್ಧಿ ಕೆಲಸ ಮಾಡುತ್ತಲೇ ಬಂದಿದ್ದರು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಅಥವಾ ಬಿಎಸ್‍ವೈ ಆಗಲಿ, ಮತ್ತೊಬ್ಬರಾಗಲಿ ಏನೇ ಆರೋಪ ಮಾಡಿದರೂ ಮತದಾರ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮತದಾರ ಕೇಳುವುದು ಅಭಿವೃದ್ಧಿ ಅದನ್ನು ನಾವು ಮಾಡುತ್ತೇವೆ ಎಂದರು.ಬಿಎಸ್‍ವೈ ವಿನಾಃಕಾರಣ ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಜನ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಅಭಿವೃದ್ಧಿಯೇ ಮುಖ್ಯ ಎಂದು ಹೇಳಿದರು.ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ನಿಮ್ಮ ಪಕ್ಷದವರ ಮೇಲೆ ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆಯಲ್ಲಿ ಯಾವೊಬ್ಬ ಶಾಸಕ, ಸಚಿವರಾಗಲಿ ಅವರು ಮೊದಲು ಕಾಂಗ್ರೆಸ್ ಕಾರ್ಯಕರ್ತರು. ಪ್ರಚಾರಕ್ಕಾಗಿ ಅವರು ಇಲ್ಲಿಗೆ ಬಂದಿದ್ದಾರೆ ಎಂದರು.

ಸಚಿವರಾದ ಕಾಗೋಡುತಿಮ್ಮಪ್ಪ, ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್ ಅವರು ಪ್ರಚಾರಕ್ಕೆ ಬಂದಿದ್ದರೂ ಸಹ ಅಲ್ಲಿನ ಬರ ಹಾಗೂ ನೀರಿನ ಸಮಸ್ಯೆ ಕುರಿತಂತೆ ಅಲ್ಲಿಯೇ ಸಭೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿ ಪರಿಹಾರ ಕಾಮಗಾರಿಗಳಿಗೆ ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.ನಿನ್ನೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಣ ಹಂಚಿರುವ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಚುನಾವಣಾ ಆಯೋಗದಿಂದ ಆರೋಪ ಸಾಬೀತಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin