ನಾನು ತಪ್ಪು ಮಾಡಿಲ್ಲ : ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಸ್ಪಷ್ಟನೆ

S-Aravind-Jadav

ಬೆಂಗಳೂರು, ಆ.24- ನಾನು ಯಾವುದೇ ಪ್ರಭಾವ ಬೀರಿಲ್ಲ. ತಪ್ಪು ಮಾಡಿಲ್ಲ. ನನ್ನ ತಾಯಿ ಜಮೀನು ಕೊಳ್ಳಲು ಸ್ವತಂತ್ರರು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದಜಾದವ್ ಇಂದಿಲ್ಲಿ ತಿಳಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕಂದಾಯ ಇಲಾಖೆಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅದರನ್ವಯ ಯಾವ ಕ್ರಮ ಕೈಗೊಳ್ಳುತ್ತಾರೋ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ಇದಲ್ಲದೇ ನಾನೇ ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ ಎಂದು ಕೂಡ ತಿಳಿಸಿದ್ದಾರೆ. ಕಾನೂನು ಪ್ರಕಾರ ನಮ್ಮ ತಾಯಿ ಜಮೀನು ಖರೀದಿಸಿದ್ದು, ವಿವಾದದ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ನಮಗೂ ಅವಕಾಶವಿದೆ ಎಂದರು.

ಕಳೆದ 14 ವರ್ಷಗಳ ಹಿಂದೆ ನನ್ನ ತಾಯಿ ಆಸ್ತಿಯನ್ನು ಮಾರಿ ಭೂಮಿ ಖರೀದಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ತಾಯಿ ಜಮೀನು ಖರೀದಿಸಿದ್ದಾಗ ತಾವು ಕೇಂದ್ರ ಸರ್ಕಾರದ ನಿಯೋಜನೆ ಮೇರೆಗೆ ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಜಮೀನು ಖರೀದಿ ಮಾಡಲು ತಮ್ಮ ತಾಯಿ ಸ್ವತಂತ್ರರಿದ್ದಾರೆ. ಕಾನೂನು ಪ್ರಕಾರ ಪೋಡಿಯಾಗದಿರುವ ಹಿನ್ನೆಲೆಯಲ್ಲಿ ಈ ರೀತಿಯ ಗೊಂದಲ ಉಂಟಾಗಿದೆ ಎಂದು ಹೇಳಿದರು. ತಮ್ಮ ಕಚೇರಿಯ ಟೈಪಿಸ್ಟ್ ಸತೀಶ್ ರಾತ್ರಿ ಉಪವಿಭಾಗಾಧಿಕಾರಿ ಕಚೇರಿಗೆ ಏಕೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿಗೆ ಕಾಗೋಡು ಸೂಚನೆ:
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರ ಮೇಲಿನ ಭೂ ವಿವಾದದ ಆರೋಪದ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪರ್ಣ ಮಾಹಿತಿಯೊಂದಿಗೆ ತಮ್ಮ ಕಚೇರಿಗೆ ಆಗಮಿಸಿ ಮಾಹಿತಿ ನೀಡುವಂತೆ ಪ್ರಧಾನಕಾರ್ಯದರ್ಶಿಗೆ ಸೂಚಿಸಲಾಗಿದೆ. ಅರವಿಂದ್ ಜಾದವ್ ಅವರ ತಾಯಿ ಹೆಸರಿಗೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೋ ಅಥವಾ ಖರೀದಿಸಿದ್ದಾರೋ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ನಿನ್ನೆ ರಾತ್ರಿ ಬೆಂಗಳೂರು ದಕ್ಷಿಣ ವಿಭಾಗದ ಕಂದಾಯ ಕಚೇರಿಯಲ್ಲಿ ದಾಖಲಾತಿ ತಿದ್ದುವ ಪ್ರಯತ್ನ ನಡೆದಿದೆ ಎಂಬ ಆರೋಪದ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin