‘ನಾನು ಹೂ ಗಾಡಿ ತಳ್ಳಿಕೊಂಡು ಕಿವಿಗೆ ಹೂವನ್ನಿಟ್ಟುಕೊಂಡು ಬೆಂಗಳೂರಿಗೆ ಬಂದವನಲ್ಲ’ : ಡಿ. ಕೆ. ಶಿವಕುಮಾರ್

Spread the love

DKShivakumar-01

ಬೆಳಗಾವಿ, ಡಿ.3- ಬೆಂಗಳೂರು-ಮೈಸೂರು ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ನೈಸ್ ಯೋಜನೆಯಲ್ಲಿ ಭಾರೀ ಅಕ್ರಮವಾಗಿರುವ ಬಗ್ಗೆ ಸದನ ಸಮಿತಿ ಮಂಡಿಸಿರುವ ವರದಿಯಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರ ಪಾತ್ರವಿದ್ದ ಬಗ್ಗೆ ಉಲ್ಲೇಖವಾಗಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ವಿಪಕ್ಷಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿವೆ. ಎಷ್ಟೇ ಆರೋಪಗಳು ನನ್ನ ಮೇಲೆ ಬಂದರೂ ಅವುಗಳನ್ನು ಹೆದರಿಸಿ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆಯ ಬ್ರಹ್ಮಾಂಡ ಅಕ್ರಮ ಬಿಚ್ಚಿಟ್ಟ ಸದನ ಸಮಿತಿ ವರದಿಯಲ್ಲಿ 2003ರ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಪಾತ್ರವಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷಗಳು ನನ್ನ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡುತ್ತಿವೆ. ನಾನು ಹೂ ಗಾಡಿ ತಳ್ಳಿಕೊಂಡು ಕಿವಿಗೆ ಹೂವನ್ನಿಟ್ಟುಕೊಂಡು ಬೆಂಗಳೂರಿಗೆ ಬಂದವನಲ್ಲ. ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದವನು ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

ನಾನು ಹಳೆ ಮೈಸೂರು ಭಾಗಕ್ಕೆ ಉತ್ತಮ ರಸ್ತೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಗೆ ಅನುಮತಿ ನೀಡಿದ್ದೆ. ಇದು ನಾನೊಬ್ಬನೇ ಅನುಮತಿ ನೀಡಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆ, ಕೈಗಾರಿಕೆ ಇಲಾಖೆಯ ಸರಣಿ ಶಿಫಾರಸುಗಳ ಮೇರೆಗೆ ಅನುಮತಿ ನೀಡಲಾಗಿತ್ತು. ಆರ್.ವಿ.ದೇಶಪಾಂಡೆಯವರು, ಧರ್ಮಸಿಂಗ್ ಅವರು ಶಿಫಾರಸು ಮಾಡಿದ್ದರು ಎಂದರು. ಯೋಜನೆಯ ಮೂಲ ಒಪ್ಪಂದಕ್ಕೆ ಅನುಮತಿ ನೀಡಿದವರು ಮಾಜಿ ಪ್ರಧಾನಿ ದೇವೇಗೌಡರು. ಈ ಯೋಜನೆಗೆ ಕೇಂದ್ರ ಸರ್ಕಾರವು ಕೂಡ ನಿರಪೇಕ್ಷಣ ಪತ್ರ (ಎನ್‍ಒಸಿ) ನೀಡಿದೆ. ಈ ಯೋಜನೆಯ ಅಕ್ರಮದ ಬಗ್ಗೆ ನನ್ನ ಹೆಸರನ್ನು ಮಾಧ್ಯಮಗಳಲ್ಲಿ ಬರೆಸಿ ಚಿತಾವಣೆಯನ್ನು ಯಾರ್ಯಾರು ಮಾಡುತ್ತಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಈ ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ, ನಾನು ಸಚಿವನಾಗಿ ಅನುಮತಿ ನೀಡಿದ್ದೇನೆ, ಅಧಿಕಾರಿಯಾಗಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಪ್ರಕರಣದಲ್ಲೂ ಕೂಡ ಅದು ಮುಂದುವರಿದಿದೆ. ಇದನ್ನು ಹೇಗೆ ಎದುರಿಸಬೇಕು ಎಂದು ನನಗೆ ಗೊತ್ತಿದೆ ಎಂದು ಹೇಳಿದರು. ನನ್ನ ಸಂಪುಟದ ಸಹೋದ್ಯೋಗಿಗಳ ಶಿಫಾರಸು, ಕೇಂದ್ರ ಸರ್ಕಾರದ ನಿರಪೇಕ್ಷಣ ಪತ್ರ ಹಾಗೂ ಮೂಲ ಒಪ್ಪಂದದನ್ವಯ ಈ ಯೋಜನೆಗೆ ಅನುಮತಿ ನೀಡಲಾಗಿದೆ. ಷಡ್ಯಂತ್ರ ಮಾಡುತ್ತಿರುವವರ ಬಂಡವಾಳ ಬಯಲಾಗಲಿದೆ ಎಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin