ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಬಿನಿ ಕಚೇರಿಗೆ ಮುತ್ತಿಗೆ

t--narasipura

ತಿ.ನರಸೀಪುರ, ಅ.25- ಒಣಗುತ್ತಿರುವ ರೈತರ ಜಮೀನಿನ ಬೆಳೆಗಳಿಗೆ ಶೀಘ್ರವಾಗಿ ನಾಲೆಗಳ ಮುಖಾಂತರ ನೀರು ಹರಿಸುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘದ ವತಿಯಿಂದ ಪಟ್ಟಣದ ಕಬಿನಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಸಕಾಲದಲ್ಲಿ ರೈತರು ಹಾಕಿರುವ ಫಸಲಿಗೆ ನೀರಿಲ್ಲದೆ ಈಗಾಗಲೇ ಸಂಪೂರ್ಣ ಬೆಳೆ ಒಣಗಿವೆ. ಕಬಿನಿ ಡ್ಯಾಂನಲ್ಲಿ 68 ಅಡಿ ನೀರು ಶೇಖರಣೆಯಾಗಿದ್ದು, ಈ ನೀರು ಈ ಭಾಗದ ರೈತರ ಬೆಳೆಗಳಿಗೆ ಸಾಕಾಗಲಿರುವುದರಿಂದ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಶೀಘ್ರವಾಗಿ 60 ದಿನದೊಳಗೆ ಪ್ರತಿ 10 ದಿನಗಳ ಕಾಲ ಮೂರು ಹಂತದಲ್ಲಿ ಈ ಕೂಡಲೇ ನಾಲೆಯ ಮುಖಾಂತರ ರೈತರ ಜಮೀನಿಗೆ ನೀರು ಹರಿಸುವ ಮೂಲಕ ಉಳಿದಿರುವ ಅಲ್ಪಸ್ವಲ್ಪಬೆಳೆಯಾದರೂ ಕೈಗೆ ಸಿಗುವಂತೆ ಕ್ರಮವಹಿಸಬೇಕು, ಬೆಳೆ ನಷ್ಟವಾಗಿ ರೈತರಿಗೆ ಎಕರೆಗೆ 20 ಸಾವಿರೂಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಿ.ಶಂಕರಯ್ಯರವರು ಸೂಪರಿಡೆಂಟ್ ಇಂಜಿನಿಯರ್ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಬೇಡಿಕೆ ಬಗ್ಗೆ ಮಾತನಾಡಿ, ಈ ಬಾಗದ ರೈತರ ಜಮೀನಿಗೆ 4 ದಿನಗಳ ಕಾಲ ನೀರು ಹರಿಸಿ 6 ದಿನಗಳ ಕಾಲ ಕೊಳ್ಳೇಗಾಲ ಬ್ರಾಂಚ್ ನಾಲೆಗಳಿಗೆ ನೀರು ಹರಿಸಲಾಗುವುದೆಂದು ಭರವಸೆ ನೀಡಿದರು.ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೊತ್ತೇಗಾಲ ಜಿ.ಶಿವಪ್ರಸಾದ್, ತಾ.ಪಂ ಸದಸ್ಯ ಮೂಗೂರು ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷ ಆಲಗೂಡು ಮಹದೇವು, ಅತ್ತಹಳ್ಳಿ ಶಿವನಂಜು, ಬನ್ನೂರು ಹುಚ್ಚೇಗೌಡ, ಕರೋಹಟ್ಟಿ ಕುಮಾರಸ್ವಾಮಿ, ಸರ್ಕಲ್‍ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಹಾಜರಿದ್ದರು.

 

► Follow us on –  Facebook / Twitter  / Google+

 

Sri Raghav

Admin