ನಾಲೆಯಲ್ಲಿ ಸೊಸೆ ಶವ ಕಂಡು ಮಾವ ಆತ್ಮಹತ್ಯೆ..!
ಮೈಸೂರು, ನ.2-ಮೂರು ದಿನಗಳ ಹಿಂದೆ ಕಣ್ಮರೆಯಾಗಿದ್ದ ಸೊಸೆಯ ಶವ ಗೊರೂರು ಗ್ರಾಮದ ವರುಣಾ ನಾಲೆಯಲ್ಲಿ ಪತ್ತೆಯಾಗುತ್ತಿದ್ದಂತೆ ವಿಷಯ ತಿಳಿದು ಮನನೊಂದ ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಸೊಸೆ ಶಾದಹಳ್ಳಿ ನಿವಾಸಿ ರುಕ್ಮಿಣಿ(24) ಹಾಗೂ ಮಾವ ರಮೇಶ್(40) ಮೃತಪಟ್ಟವರು. ಕಳೆದ ಮೂರು ತಿಂಗಳ ಹಿಂದೆ ಶಾದಹಳ್ಳಿಯ ನಿವಾಸಿ ಪುನೀತ್ ಎಂಬುವರ ಜೊತೆ ರುಕ್ಮಿಣಿ ವಿವಾಹವಾಗಿತ್ತು. ಇತ್ತೀಚೆಗೆ ಇವರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ. ಜಗಳದಿಂದ ಬೇಸತ್ತ ರುಕ್ಮಿಣಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಪುನೀತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಂದು ಬೆಳಗ್ಗೆ ಗೊರೂರು ಗ್ರಾಮದ ವರುಣಾ ನಾಲೆಯಲ್ಲಿ ರುಕ್ಮಿಣಿ ಶವ ಪತ್ತೆಯಾಗಿದೆ. ಈ ಘಟನೆಯಿಂದ ನೊಂದ ಮಾವ ರಮೇಶ್ (ಪುನೀತ್ನ ತಂದೆ) ಮಗನ ವರ್ತನೆಗೆ ಬೇಸತ್ತು ಪಾಲಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನೀತ್ ಕಣ್ಮರೆಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.