ನಾಳೆ ಪ್ರಕಟವಾಗಲಿದೆ ತೀವ್ರ ಕುತೂಹಲ ಕೆರಳಿಸಿರುವ ಆರ್‍ಕೆ ನಗರ ಉಪಚುನಾವಣಾ ಫಲಿತಾಂಶ

RK-Nagar--02

ಚೆನ್ನೈ, ಡಿ.23-ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡಿನ ಪ್ರತಿಷ್ಟಿತ ಆರ್.ಕೆ.ನಗರ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳಲ್ಲಿ ಎದೆ ಬಡಿತ ಜೋರಾಗಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ನಿಧನದಿಂದ ತೆರವಾಗಿರುವ ಚೆನ್ನೈನ ಉತ್ತರ ಭಾಗದಲ್ಲಿರುವ ಈ ಕ್ಷೇತ್ರಕ್ಕೆ ಡಿ.21ರಂದು ನಡೆದ ಉಪ ಚುನಾವಣೆಯಲ್ಲಿ ಶೇ.74ರಷ್ಟು ಮತದಾನವಾಗಿತ್ತು. ಆಡಳಿತರೂಢ ಪಕ್ಷದಿಂದ ಮಧುಸೂದನನ್, ಡಿಎಂಕೆಯ ಎಂ. ಗಣೇಶ್ ಹಾಗೂ ಟಿಟಿವಿ ದಿನಕರನ್(ಸ್ವತಂತ್ರ ಅಭ್ಯರ್ಥಿ) ಸೇರಿದಂತೆ 59 ಮಂದಿ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

17 ತಿಂಗಳ ಎಐಎಡಿಎಂಕೆ ಸರ್ಕಾರದ ರಿಪೋರ್ಟ್ ಕಾರ್ಡ್ ಎಂದೇ ಪರಿಗಣಿತವಾದ ಈ ಚುನಾವಣಾ ಫಲಿತಾಂಶ ಸಹಜವಾಗಿಯೇ ಕದನ ಕುತೂಹಲ ಕೆರಳಿಸಿದೆ. ಈ ಉಪ ಚುನಾವಣೆಯು ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಅಪೋಲೋ ಆಸ್ಪತ್ರೆಯಲ್ಲಿ ಜಯಾ ಚಿಕಿತ್ಸೆ ಪಡೆಯುತ್ತಿದ್ದ ವೀಡಿಯೋವನ್ನು ಎಐಎಡಿಎಂಕೆ ಬಂಡುಕೋರ ನಾಯಕ ಟಿ.ಟಿ.ವಿ. ದಿನಕರನ್ ಬಣ(ದಿನಕರನ್ ಪರಮಾಪ್ತ ವಟ್ರಿವೇಲ್) ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

Sri Raghav

Admin