ನಾವಿದ್ದೇವೆ, ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಿ

Spread the love

Nilamani--01

ಬೆಂಗಳೂರು, ಮೇ 11- ದೇಶದ ಗಮನ ಸೆಳೆದಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸಕಲ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್.ರಾಜು ಹೇಳಿದ್ದಾರೆ.ಪೊಲೀಸ್ ಪ್ರಧಾನ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಮುಕ್ತ ವಾತಾವರಣದಲ್ಲಿ ನಿರ್ಭೀತಿಯಿಂದ ಬಂದು ಮತ ಚಲಾವಣೆ ಮಾಡುವಂತೆ ಕರೆ ನೀಡಿದರು.

ಜ.17ರಂದು ಕೇಂದ್ರ ಚುನಾವಣಾ ಆಯುಕ್ತರು ರಾಜ್ಯಕ್ಕೆ ಬಂದು ಕಾನೂನು ಸುವ್ಯವಸ್ಥೆಯ ಮಾಹಿತಿ ಪಡೆದುಕೊಂಡರು. ಅಂದಿನಿಂದ ಆರಂಭವಾದ ತಯಾರಿಗಳು ವ್ಯವಸ್ಥಿತವಾಗಿ ನಡೆದಿವೆ. ಈವರೆಗೂ ಎಲ್ಲಿಯೂ ಗಂಭೀರ ಪ್ರಮಾಣದ ಅಹಿತಕರ ಘಟನೆಗಳು ನಡೆದಿಲ್ಲ. ಒಂದು ಕೋಮುಗಲಭೆಯೂ ನಡೆದಿಲ್ಲ. ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ, ಶಾಂತಿಯುತ ವಾತಾವರಣ ನಿರ್ಮಿಸಲು ಪೊಲೀಸರು ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಚುನಾವಣೆ ನಡೆಯುತ್ತಿದೆಯೋ ಇಲ್ಲವೋ ಎಂಬಂತ ತಣ್ಣನೆ ವಾತಾವರಣ ಮೂಡಿಸಿರುವುದು ಪೊಲೀಸರ ಹೆಗ್ಗಳಿಕೆ ಎಂದು ಡಿಜಿಪಿ ಹೇಳಿದರು.

ಚುನಾವಣೆ ಕರ್ತವ್ಯಕ್ಕಾಗಿ ಎಡಿಜಿಪಿ ಕಮಲ್‍ಪಂತ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಅದರಂತೆ ಖರ್ಚು, ವೆಚ್ಚಗಳು ಮತ್ತು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಹಿರಿಯ ಅಧಿಕಾರಿ ಆರ್.ಹಿತೇಂದ್ರ, ಶಸ್ತ್ರಾಸ್ತ್ರ ಪಡೆಗಳು ಹಾಗೂ ಭದ್ರತಾ ಪಡೆಗಳ ನಿಯೋಜನೆಗೆ ಡಿಐಜಿ ಸಂದೀಪ್ ಪಾಟೀಲ್ ಅವರನ್ನು ನೇಮಿಸಲಾಗಿತ್ತು. ಈ ಮೂವರು ಅಧಿಕಾರಿಗಳು ಕೇಂದ್ರ ಚುನಾವಣಾ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದರು ಎಂದು ವಿವರಿಸಿದರು.

ಚುನಾವಣಾ ಅಕ್ರಮಗಳನ್ನು ತಡೆಯಲು ಎಲ್ಲಾ ಕಡೆ ಚೆಕ್‍ಪೊೀಸ್ಟ್‍ಗಳನ್ನು ನಿರ್ಮಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು 97000 ಆಯುಧಗಳನ್ನು ಜಪ್ತಿ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ 49,565 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಹೊರ ರಾಜ್ಯಗಳ ಪೊಲೀಸರ ಬಳಕೆ:
ರಾಜ್ಯದಲ್ಲಿ ಮತದಾನಕ್ಕಾಗಿ 58,302 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 21,464 ಮತಗಟ್ಟೆಗಳು ಕ್ಲಿಷ್ಟಕರ ಎಂದು ಪರಿಗಣಿಸಲಾಗಿದೆ. ಉಳಿದವು ಸಾಮಾನ್ಯ ಮತಗಟ್ಟೆಗಳಾಗಿವೆ. ಕ್ಲಿಷ್ಟ ಮತಗಟ್ಟೆಗಳಿಗೆ ಹೆಡ್‍ಕಾನ್‍ಸ್ಟೇಬಲ್ ಮತ್ತು ಕಾನ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗುತ್ತಿದೆ. ಸಾಮಾನ್ಯ ಮತಗಟ್ಟೆಗಳಿಗೆ ಕಾನ್‍ಸ್ಟೇಬಲ್ ಅಥವಾ ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಲಾಗುವುದು ಎಂದರು.

ಇದೇ ಮೊದಲ ಬಾರಿಗೆ ನೆರೆಯ ರಾಜ್ಯಗಳಾದ ಗೋವಾ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳಿಂದ 7500 ಪೊಲೀಸರು ಹಾಗೂ ಗೃಹರಕ್ಷಕ ಮತ್ತು ನಾಗರಿಕ ಸೇವೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ನಮ್ಮ ಮನವಿಗೆ ಸ್ಪಂದಿಸಿ ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಿಂದಲೂ ಸಿಬ್ಬಂದಿಗಳನ್ನು ಕಳುಹಿಸಲಾಗಿತ್ತು. ಆದರೆ, ಅಗತ್ಯಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಇದ್ದುದ್ದರಿಂದ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಕರ್ತವ್ಯಕ್ಕೆ ಒಟ್ಟು 43,653 ಪೊಲೀಸರು, 22,172 ಗೃಹರಕ್ಷಕದಳ, 2ಸಾವಿರ ನಾಗರಿಕ ಸೇವಾ ದಳ, 434 ಅರಣ್ಯ ಸಿಬ್ಬಂದಿ, ಲೋಕಾಯುಕ್ತ, ಸಿಐಡಿ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 3ಸಾವಿರ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಜತೆಗೆ 585 ಕೇಂದ್ರ ಸಶಸ್ತ್ರಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದ್ದು, ಈಗಾಗಲೇ 584 ಕಂಪೆನಿಗಳು ರಾಜ್ಯಕ್ಕೆ ಬಂದಿವೆ. ಈ ಸಿಬ್ಬಂದಿಗಳನ್ನು ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಸ್ಕ್ವಾಡ್‍ಗಳಿಗೆ ನಿಯೋಜಿಸಲಾಗಿದೆ. ಜತೆಗೆ ಕ್ಲಿಷ್ಟಕರ ಮತಗಟ್ಟೆಗಳ ಪ್ರದೇಶಗಳಿಗೆ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಚುನಾವಣೆ ಸಂಬಂಧ ದಾಖಲಾಗಿರುವ ಪ್ರಕರಣಗಳು 117 ಮಾತ್ರ. 18 ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ-ಧಾರವಾಡದಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದರಿಂದ ಎಲ್ಲಿಯೂ ಕೋಮುಗಲಭೆಗಳು ವರದಿಯಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದ್ದು ಹೊರತುಪಡಿಸಿ ಇನ್ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ತಲೆ ಎತ್ತಿಲ್ಲ. ಜನವರಿ, ಫೆಬ್ರವರಿಯಲ್ಲಿ ಕೆಲ ಮಾಹಿತಿಗಳು ಕೇಳಿಬಂದಿದ್ದು ಹೊರತುಪಡಿಸಿದರೆ ಅನಂತರ ನಕ್ಸಲ್ ಚಟುವಟಿಕೆಗಳು ಕಂಡು ಬಂದಿಲ್ಲ. ಎಲ್ಲಿಯೂ ಚುನಾವಣೆ ಬಹಿಷ್ಕರಿಸಿದ್ದು, ಪ್ರಚಾರ ಮಾಡಿದ್ದು ಇಲ್ಲ. ಆದರೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದರು.  ಎಡಿಜಿಪಿ ಕಮಲ್‍ಪಂಥ್ ಮಾತನಾಡಿ, ಗಲಭೆ ನಡೆದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಅರೆಸೇನೆ ಹಾಗೂ ಆರ್‍ಎಎಫ್ ತಂಡಗಳನ್ನು ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಒಟ್ಟಾರೆ ಚುನಾವಣಾ ಕರ್ತವ್ಯಕ್ಕಾಗಿ 1.45ಲಕ್ಷ ಸಿಬ್ಬಂದಿಯ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin