ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಯುವಕ ಸಾವು
ಕೋಲಾರ, ಅ.7- ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಗಮನಕ್ಕೆ ಬಾರದೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೋಲಾರದ ಕಾರ್ತಿಕ್ (25) ಮೃತಪಟ್ಟ ಯುವಕನಾಗಿದ್ದು, ಗಂಭೀರ ಗಾಯಗೊಂಡಿರುವ ಗೋಪಿ ಮತ್ತು ನಾಗೇಶ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಮೂವರು ಕೋಲಾರದವರಾಗಿದ್ದು, ಅಡುಗೆ ಕೆಲಸ ಮಾಡುತ್ತಿದ್ದರು. ರಾತ್ರಿ ಸಮರಂಭವೊಂದಕ್ಕೆ ಅಡುಗೆ ಕೆಲಸಕ್ಕೆ ತೆರಳಿ ಮುಂಜಾನೆ 4 ಗಂಟೆಯಲ್ಲಿ ಒಂದೇ ಬೈಕ್ನಲ್ಲಿ ಮನೆಗೆ ವಾಪಸಾಗುತ್ತಿದ್ದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ವಡೇರಹಳ್ಳಿ ಸಮೀಪ ರಸ್ತೆ ಬದಿ ನಿಂತಿದ್ದ ಲಾರಿ ಗಮನಕ್ಕೆ ಬಾರದೆ ಬೈಕ್ ಅಪ್ಪಳಿಸಿದ್ದರಿಂದ ಕಾರ್ತಿಕ್ ಕೆಳಗೆ ಬಿದ್ದು ತಲೆಗೆ ತೀವ್ರಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.