ನಿಮ್ಮನ್ನು ಹೈರಾಣಾಗಿಸಲಿದೆ ಈ ಬಾರಿಯ ಬೇಸಿಗೆ, ಹವಾಮಾನ ಇಲಾಖೆಯಿಂದ ಆತಂಕದ ವರದಿ

Summer--01

ನವದೆಹಲಿ, ಮಾ.1-ಈ ಬಾರಿಯ ಬೇಸಿಗೆ ಭಾರತೀಯರಿಗೆ ಭಾರೀ ದುಬಾರಿಯಾಗಿರಲಿದೆ ಎಂಬ ಆತಂಕಕಾರಿ ಸತ್ಯವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಹಿರಂಗಪಡಿಸಿದೆ.
ಈ ವರ್ಷದ ಮೇ ತಿಂಗಳಿನಿಂದ ಜೂನ್ ವರೆಗಿನ ಅವಧಿಯಲ್ಲಿ ಸೂರ್ಯನು ಬೆಂಕಿ ಉಂಡೆಯಂತೆ ಬಿಸಿ ಹವೆಯನ್ನು ಉಗುಳಲಿದ್ದು ಬೇಸಿಗೆ ಬಿಸಿಲಿನಿಂದ ಜನ ಕಂಗಾಲಾಗುವ ಸಾಧ್ಯತೆಗಳಿವೆ ಎಂದು ಇಲಾಖೆಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.  ಬಿಸಿಲಿನ ತಾಪ ಎಷ್ಟರ ಮಟ್ಟಿಗೆ ಇರುತ್ತದೆಯೆಂದು ಈಗಲೇ ನಿಖರವಾಗಿ ಹೇಳುವುದು ಸ್ವಲ್ಪ ಕ್ಲಿಷ್ಟಕರವೇ ಆದರೂ, ಸೂರ್ಯನ ತಾಪ ಸಾಮಾನ್ಯ ಉಷ್ಣಾಂವನ್ನು ಮೀರಿ ಬೇಗೆ ಸೃಷ್ಟಿಸಲಿದೆ. ಕಳೆದ 116 ವರ್ಷಗಳ ಅವಧಿಯಲ್ಲಿ ಇದು ಎಂಟನೆಯ ಬಾರಿ ಇಂತಹ ಭೀಕರ ಬಿಸಿಲಿನ ತಾಪ ಉಂಟಾಗಲಿದೆ. ಕಳೆದ ಜನವರಿ ತಿಂಗಳಲ್ಲೂ ಕೂಡ ದೇಶದ ವಿವಿಧೆಡೆ ಬಿಸಿಲಿನ ತಾಪ ಮಾಮೂಲಿಗಿಂತ ಅತ್ಯಧಿಕವಾಗಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷಕ್ಕಿಂತ ಕಳೆದ 2016ರಲ್ಲಿಯೂ ಕೂಡ ಬೇಸಿಗೆಯ ಬಿಸಿಲು ಅತ್ಯಧಿಕವಾಗಿತ್ತು. 2016ರ ಬಿಸಿಲು ಎಷ್ಟು ಭಯಂಕರವಾಗಿತ್ತೆಂದರೆ, ಕಳೆದ 1880ರಿಂದ ಇಲ್ಲಿಯ ವರೆಗೂ ಇಂತಹ ಬಿಸಿಲನ್ನು ಪ್ರಪಂಚ ಕಂಡಿರಲಿಲ್ಲ ಎನ್ನುತ್ತದೆ ವಿಶ್ವ ಹವಾಮಾನ ಇಲಾಖೆ. ಅಂದರೆ 2016ರ ಬಿಸಿಲಿಗಿಂತಲೂ ಈ ಬಾರಿಯ ಬಿಸಿಲು ಜೋರಾಗಿರುತ್ತದೆ ಎಂಬುದು ಭಾರತೀಯ ಹವಾಮಾನ ಇಲಾಖೆಯ ಭವಿಷ್ಯವಾಗಿದೆ. 2016 ರಲ್ಲಿ ಬಿಸಿಲಿನ ತಾಪ ದಾಖಲೆ ಪ್ರಮಾಣದಲ್ಲಿತ್ತು ಎಂದು ನಾಸಾ ವಿಜ್ಞಾನಿಗಳೂ ಕೂಡ ಹೇಳಿದ್ದಾರೆ. ಅಂದರೆ ಬಿಸಿಲು ಸತತವಾಗಿ ಮೂರು ವರ್ಷಗಳಿಂದಲೂ ಏರುಮುಖವಾಗಿಯೇ ಸಾಗುತ್ತಿದ್ದು, ಈ ವರ್ಷದ ಮೇ ಯಿಂದ ಜೂನ್ ತಿಂಗಳ ವರೆಗೆ ಬಿಸಿಲಿನ ಬೇಗೆ ಸಹಿಸಲಸಾಧ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ.

+ ಈಶಾನ್ಯದಲ್ಲಿ ರವಿಯ ಅಬ್ಬರ:

ದೇಶದ ವಿವಿಧ ರಾಜ್ಯಗಳು ಸೂರ್ಯನ ಪ್ರತಾಪಕ್ಕೆ ನಲುಗಲಿವೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಸೂರ್ಯನ ಅಬ್ಬರ ಹೆಚ್ಚಾಗಿರುತ್ತದೆ. ಈಶಾನ್ಯ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳು ಬಿಸಿಲಿನ ಝಳದ ಅಲೆಯಲ್ಲಿ ತತ್ತರಿಸಿ ಹೋಗುವ ಸಾಧ್ಯತೆಗಳಿವೆ. ಒಟ್ಟಾರೆ ಸಾಮಾನ್ಯಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್‍ಗಿಂತಲೂ ಉಷ್ಣಾಂಶ ಅಧಿಕವಾಗಿರುತ್ತದೆ. ಅಂದರೆ ಎಷ್ಟು ಡಿಗ್ರಿ ಸೆಲ್ಸಿಯಸ್ ಎಂಬುದು ಖಚಿತವಾಗಿಲ್ಲ. ಇದು ಜನರನ್ನು ಬಿಸಿಲಿನ ತಾಪದಿಂದ ನರಳುವಂತೆ ಮಾಡುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇತರೆ ರಾಜ್ಯಗಳಲ್ಲೂ ಕೂಡ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಲಿದೆ.

ಸೂರ್ಯನ ಪ್ರತಾಪವು ಈಶಾನ್ಯ ರಾಜ್ಯಗಳಲ್ಲದೆ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‍ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ತೆಲಂಗಾಣ ರಾಜ್ಯಗಳು ಬಿಸಿಲಿನ ಬೇಗೆಯಲ್ಲಿ ಸಿಲುಕಿ ಜರ್ಝರಿತವಾಗಲಿವೆ.   ಇವುಗಳ ಜೊತೆಗೆ ಮಹಾರಾಷ್ಟ್ರದ ಮಧ್ಯ ಮಹಾರಾಷ್ಟ್ರ, ವಿದರ್ಭ ಪ್ರದೇಶ ಮತ್ತು ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲೂ ತನ್ನ ಪ್ರತಾಪವನ್ನು ಸೂರ್ಯ ದೇವ ತೋರಿಸಲಿದ್ದಾನೆ.   1901ರಿಂದ ಈಚೆಗೆ ಅತ್ಯಂತ ಬಿಸಿಲಿನ ತಾಪ ಕಂಡ ವರ್ಷ 2016 ಎಂದು ಈಗಾಗಲೇ ದಾಖಲಾಗಿದೆ. ರಾಜಸ್ಥಾನದ ಫಲೋಡಿಯಲ್ಲಿ ಕಳೆದ ವರ್ಷ 51 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

+ ಸಾವು-ನೋವು:

2016ರಲ್ಲಿ ದೇಶಾದ್ಯಂತ 1,600ಕ್ಕೂ ಹೆಚ್ಚು ಜನ ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದರು. ಆ ಪೈಕಿ 700 ಮಂದಿ ಬಿಸಿಲಿನ ಝಳಕ್ಕೇ ಗುರಿಯಾಗಿ ಸಾವನ್ನಪ್ಪಿದ್ದರು. ಅದರಲ್ಲಿ 400 ಮಂದಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೇ ಮೃತಪಟ್ಟಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin