ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಕಾರು ಡಿಕ್ಕಿ : ಗ್ರಾ.ಪಂ.ಸದಸ್ಯ ಸೇರಿ ಮೂವರ ಸಾವು

hiresave

ಹಿರೀಸಾವೆ, ಫೆ.13-ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಮೂವರು ಮೃತಪಟ್ಟಿದ್ದರು, ಇಬ್ಬರು ಗಾಯಗೊಂಡಿರುವ ಘಟನೆ ಮುಂಜಾನೆ ಸಂಭವಿಸಿದೆ.ಹಿರೀಸಾವೆ ಹೋಬಳಿ ರಂಗನಾಥಪುರ ಗ್ರಾಮ ವಾಸಿ ಜಿನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಧು (30), ಪ್ರವೀಣ (30) ಮತ್ತು ಆರ್.ವಿ.ಯಶವಂತಕುಮಾರ್(22) ಮೃತಪಟ್ಟ ನತದೃಷ್ಟರು.ಕಾರು ಚಾಲಕ ಚೇತನ್‍ಕುಮಾರ್ ಮತ್ತು ಧರ್ಮ ಶೇಖರ ಎಂಬುವರು ಗಾಯಗೊಂಡಿದ್ದು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾತ್ರಿ ಕಾರಿನಲ್ಲಿ ಹಿರೀಸಾವೆಗೆ ಬಂದಿದ್ದ ಐವರು ಸ್ನೇಹಿತರು ಮುಂಜಾನೆ 1.30ರ ಸುಮಾರಿನಲ್ಲಿ ಎಂ.ಕೆ.ಹೊಸೂರು ಮಾರ್ಗವಾಗಿ ಗ್ರಾಮಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ.

ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಸೀಟ್‍ನಲ್ಲಿ ಕುಳಿತಿದ್ದ ಪ್ರವೀಣ್, ಆರ್.ವಿ.ಯಶವಂತಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎಂ.ಕೆ.ಹೊಸೂರು ಗ್ರಾಮಸ್ಥರು ಗಾಯಾಳು ಮಧುರನ್ನು ಬೇರೊಂದು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಹಿರೀಸಾವೆ ಆಸ್ಪತ್ರೆಯಲ್ಲಿ ಇಡಲಾಗಿದೆ.ಸ್ಥಳಕ್ಕೆ ಧಾವಿಸಿದ ಹಿರೀಸಾವೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin