ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಅಮಿತ್ ಷಾ

Amit-Shah--01

ಆದಿಚುಂಚನಗಿರಿ, ಆ.13- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿ ಕಾಲಭೈರವನ ದರ್ಶನ ಪಡೆದು ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಇಂದು ಬೆಳಗ್ಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅಮಿತ್ ಷಾ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಶ್ರೀಕ್ಷೇತ್ರದ ಆರಾಧ್ಯ ದೈವವಾದ ಕಾಲಭೈರವೇಶ್ವರನ ದೇವಾಲಯಕ್ಕೆ ತೆರಳಿದ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೆಲಕಾಲ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಅಶ್ವತ್ಥ ನಾರಾಯಣ, ಸುರೇಶ್‍ಗೌಡ, ಎ.ನಾರಾಯಣಸ್ವಾಮಿ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Amiti-shah--01

ರಸ್ತೆ ಮೂಲಕ ಮಠಕ್ಕೆ ಆಗಮಿಸಿದ ಅಮಿತ್ ಷಾ ಅವರಿಗೆ ಮಾರ್ಗಮಧ್ಯೆ ಕುಣಿಗಲ್‍ನಲ್ಲೂ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಮಠದ ಆವರಣದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರ ದಂಡು ನೆರೆದಿತ್ತಲ್ಲದೆ ಒಂದು ರೀತಿಯ ಹಬ್ಬದ ವಾತಾವರಣ ಮನೆ ಮಾಡಿತ್ತು. ಅಮಿತ್ ಷಾ ಅವರ ಮಠದ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಇದೇ ಮೊದಲ ಬಾರಿಗೆ ಅಮಿತ್ ಷಾ ಮಠಕ್ಕೆ ಭೇಟಿ ನೀಡುತ್ತಿರುವುದು ಹಲವು ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದು, ಈ ನಿಟ್ಟಿನಲ್ಲಿ ಅಮಿತ್ ಷಾ ಅವರ ಮಠದ ಭೇಟಿ ಸಂಜೀವಿನಿಯಾಗಬಹುದೆಂದೇ ನಿರೀಕ್ಷಿಸಲಾಗಿದೆ.  ಈ ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗರನ್ನು ಸೆಳೆಯಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿರುವ ನಂತರ ಈಗ ಮತ್ತೊಂದು ಹೆಜ್ಜೆಯಾಗಿ ಅಮಿತ್ ಷಾ ಅವರನ್ನು ಶ್ರೀಮಠಕ್ಕೆ ಕರೆತಂದು ಒಕ್ಕಲಿಗರ ವಿಶ್ವಾಸ ಗಳಿಸುವ ಪ್ರಯತ್ನ ನಡೆದಿದೆ.

ರಾರಾಜಿಸುತ್ತಿವೆ ಫ್ಲಕ್ಸ್‍ಗಳು:

ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಿಂದ ಆದಿಚುಂಚನಗಿರಿ ಆವರಣದವರೆಗೂ ಎಲ್ಲೆಲ್ಲೂ ರಾಜಕೀಯ ನಾಯಕರ ಫ್ಲಕ್ಸ್‍ಗಳೇ ರಾರಾಜಿಸುತ್ತಿವೆ. ಆದಿಚುಂಚನಗಿರಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಸೇರಿದಂತೆ ಹಲವು ಬಿಜೆಪಿ ನಾಯಕರು ಸ್ವಾಗತ ಕೋರುವ ಫ್ಲಕ್ಸ್‍ಗಳು ರಸ್ತೆಯಲ್ಲಿ ತಲೆ ಎತ್ತಿ ನಿಂತಿವೆ. ಜತೆಗೆ ಸ್ವಾಗತ ಕಮಾನುಗಳು ಎಲ್ಲೆಡೆ ತುಂಬಿ ಹೋಗಿವೆ.
ಶಾಸಕರಾದ ಸುರೇಶ್‍ಗೌಡ, ವಿಶ್ವನಾಥ್, ಬಿಜೆಪಿ ಸಹ ವಕ್ತಾರ ಆನಂದ್ ಸೇರಿದಂತೆ ಸ್ಥಳೀಯ ಮುಖಂಡರ ಫ್ಲಕ್ಸ್‍ಗಳು ಇಡೀ ಕಾರ್ಯಕರ್ತರ ದಂಡು ಇಲ್ಲಿ ನೆರೆದಿದೆ.

ಬಿಗಿ ಭದ್ರತೆ:

ಅಮಿತ್ ಷಾ ಅವರು ದೇವಾಲಯ ಹಾಗೂ ಮಠಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿತ್ತು. ಪಾಸ್ ಇದ್ದವರಿಗೆ ಮಾತ್ರ ಒಳ ಪ್ರವೇಶಿಸಲು ಅನುಮತಿ ನೀಡಲಾಗಿದ್ದು, ಎಲ್ಲರನ್ನೂ ತಪಾಸಣೆಗೊಳಪಡಿಸಿಯೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿತ್ತು. ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಹನಗಳಿಗೂ ಸಹ ಭದ್ರತೆ ದೃಷ್ಟಿಯಿಂದ ತಪಾಸಣೆ ಮಾಡಿ ಬಿಡಲಾಗುತ್ತಿತ್ತು.

Sri Raghav

Admin