ನಿರ್ವಿಘ್ನ ಪರಿವರ್ತನಾ ಯಾತ್ರೆ ಸಮಾರೋಪಕ್ಕಾಗಿ ಬಿಜೆಪಿಯಿಂದ ಸ್ಪೆಷಲ್ ಪೂಜೆ

Pooje--BJP--01
ಬೆಂಗಳೂರು,ಜ.26-ಮುಂದಿನ ವಿಧಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಯಾವು ನಿರ್ವಿಘ್ನವಿಲ್ಲದಂತೆ ನಡೆಯಲು ಇಂದು ಅರಮನೆ ಮೈದಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಮಾವೇಶ ನಡೆಯುವ ಅರಮನೆ ಮೈದಾನದ ಕೃಷ್ಣ ವಿಹಾರ್‍ನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ್ ಲಿಂಬಾವಳಿ ಸೇರಿದಂತೆ ಮತ್ತಿತರ ನಾಯಕರು ಸಮಾರೋಪ ಸಮಾರಂಭಕ್ಕೆ ಯಾವುದೇ ಆತಂಕ ಎದುರಾಗದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಭೂಮಿ ಪೂಜೆ, ಗಣಹೋಮ, ವಾಸ್ತು ಹೋಮ-ಹವನ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಲಿ ಎಂದು ಪ್ರಾರ್ಥಿಸಿದರು.   ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

ಫೆ.4ರಂದು ಮಹದಾಯಿ ನದಿನೀರು ಹಂಚಿಕೆ ವಿವಾದ ಮುಂದಿಟ್ಟುಕೊಂಡು, ಕನ್ನಡಪರ ಸಂಘಟನೆಗಳು ಅಂದು ಬೆಂಗಳೂರು ಬಂದ್‍ಗೆ ಕರೆ ನೀಡಿವೆ. ಖುದ್ದು ಪ್ರಧಾನಿಯೇ ಬರುತ್ತಿರುವುದರಿಂದ ಕಾರ್ಯಕ್ರಮಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಬಿಜೆಪಿ ಹರಸಾಹಸಪಟ್ಟಿದೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದು , ಅಂದು ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಜಿಲ್ಲಾ ಮುಖಂಡರಿಗೆ ಸೂಚಿಸಲಾಗಿದೆ. ಬಿಜೆಪಿಯ ಶಕ್ತಿ ಪ್ರದರ್ಶನವೆಂದೇ ಹೇಳಲಾಗುತ್ತಿರುವ ಪರಿವರ್ತನಾ ಯಾತ್ರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ಸಂಭವವಿದೆ.

Sri Raghav

Admin