ನಿಲ್ಲದ ಅನ್ನದಾತನ ಆತ್ಮಹತ್ಯೆ ಸರಣಿ, ಮಂಡ್ಯ ಜಿಲ್ಲೆಯಲ್ಲಿ 238 ರೈತರ ಆತ್ಮಹತ್ಯೆ

Spread the love

Former-Suicide-1

ಮಂಡ್ಯ, ಮೇ 11– ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಲೇ ಇದೆ.  ತಾಲೂಕಿನ ಬಿ ಮರಳ್ಳಿ ಗ್ರಾಮದ ಶಂಕರೇಗೌಡ (47) ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಒಂದು ಎಕರೆ ಜಮೀನಿನಲ್ಲಿ ಶಂಕರೇಗೌಡ ಕಬ್ಬು ಹಾಗೂ ರೇಷ್ಮೆ ಬೆಳೆಗಾಗಿ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ 2 ಲಕ್ಷ ಸಾಲ ಹಾಗೂ ಖಾಸಗಿಯಾಗಿ ಐದಾರು ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.  ಸಾಲವಾಗಿ ಪಡೆದ ಹಣ ಹಿಂದಿರುಗಿಸಲಾಗದೆ ಮಾನಸಿಕವಾಗಿ ನೊಂದಿದ್ದ ಶಂಕರೇಗೌಡ ಅವರು ಮಂಗಳವಾರ ಮರಳ್ಳಿಯಲ್ಲಿ ಕೆರೆ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು.ಇದನ್ನು ಗಮನಿಸಿದ ದಾರಿಹೋಕರು ತಕ್ಷಣ ಇವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಇಲ್ಲಿನ ವೈದ್ಯರು ಚಿಕಿತ್ಸೆ ನೀಡಿದರಾದರೂ ಚೇತರಿಸಿಕೊಳ್ಳದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲು ತಿಳಿಸಿದ್ದಾರೆ.  ಅದರಂತೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.  ಸುದ್ದಿ ತಿಳಿದ ತಹಸೀಲ್ದಾರ್ ಮಾರುತಿ ಪ್ರಸನ್ನ, ಮಾಜಿ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದುವರೆಗೂ ಮಂಡ್ಯದಲ್ಲಿ 238 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಲಾರ ವರದಿ:

ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುನಿಯನಹಳ್ಳಿಯಲ್ಲಿ ನಡೆದಿದೆ. ಮುನಿಯಪ್ಪ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.  ಬೆಳೆಗಾಗಿ ಕೈ ಸಾಲ ಮಾಡಿಕೊಂಡಿದ್ದ ಮುನಿಯಪ್ಪ ತೋಟದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.  ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.  ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ವರದಿ:

ಆಲೂರು ತಾಲೂಕಿನ ಕಕ್ಕೆಹಳ್ಳಿಯ ರೈತ ಮೋಹನ್ ಕುಮಾರ್ (56) ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಕೃಷಿ ಚಟುವಟಿಕೆಗಾಗಿ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಮತ್ತು ಒಂದಷ್ಟು ಕೈಸಾಲವನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ. ಬರದ ಹಿನ್ನೆಲೆಯಲ್ಲಿ ಸಪೊಟ ಬೆಳೆ ಕೈಕೊಟ್ಟಿದ್ದರಿಂದ ಮನನೊಂದ ರೈತ ಮೋಹನ್‍ಕುಮಾರ್ ತಮ್ಮ ಜಮೀನಿನಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin