ನೀರು ಬಿಡುವುದಿಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಿ : ಸರ್ಕಾರಕ್ಕೆ ಗೌಡರ ಸಲಹೆ

Spread the love

Devegowda

ಬೆಂಗಳೂರು,ಸೆ.21-ಸುಪ್ರೀಂಕೋರ್ಟ್ ಕಾವೇರಿ ವಿಚಾರದಲ್ಲಿ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಬೇಡ. ಆದರೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ.   ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ದೃಢ ನಿರ್ಧಾರ ತೆಗೆದುಕೊಳ್ಳಿ. ಅದೇನೇಗುತ್ತದೋ ನೋಡೋಣ, ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಿ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿದೆ. ಇದನ್ನು ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.  ನೀರಿನ ವಿಚಾರವಾಗಿ ಈ ಹಿಂದೆ ನಾನು ಮೂರು ಬಾರಿ ರಾಜೀನಾಮೆ ಕೊಟ್ಟಿದ್ದೆ. ನಾಳೆಯೇ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ರಾಜೀನಾಮೆ ನೀಡಿದರೆ ಹೋರಾಟ ಮಾಡುವವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ನಾನು ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ ಎಂಬ ಉದ್ದೇಶದಿಂದ ಹೀಗೆ ಹೇಳುತ್ತಿಲ್ಲ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿಯೇ ಹೀಗೆ ಹೇಳುತ್ತಿದ್ದೇನೆ ಎಂದರು. ನಮ್ಮ ಜಲಾಶಯದ ಸ್ಥಿತಿಗತಿ ನೋಡಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಂತೆ ಕಾಣುತ್ತಿಲ್ಲ. ಜನರಿಗೆ ಕುಡಿಯುವ ನೀರು ಮುಖ್ಯವೋ ಅಲ್ಲಿನ(ತಮಿಳುನಾಡಿಗೆ) ಬೆಳೆಗೆ ನೀರು ಮುಖ್ಯವೋ ಎಂದು ದೇವೇಗೌಡರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಕಾವೇರಿ ನ್ಯಾಯಾಧಿಕರಣದ ನ್ಯಾಯಾಧೀಶರಲ್ಲೇ ಒಮ್ಮತ ಇರಲಿಲ್ಲ. ಹಾಗಾಗಿ 2007ರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು ಎಂದರು.  ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 9 ವರ್ಷದಿಂದ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ನಾವು ಸಲ್ಲಿಸಿದ್ದ ಮೇಲ್ಮನವಿ ಇನ್ನು ವಿಚಾರಣೆಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಅಗತ್ಯವೇನಿತ್ತು ಎಂದ ಅವರು, ನ್ಯಾಯಾಲಯದ ಬಗ್ಗೆ ಗೌರವ ಇಟ್ಟುಕೊಂಡೇ ಹೀಗೆ ಹೇಳುತ್ತಿದ್ದೇನೆ. ನಮ್ಮಲ್ಲಿ ಒಂದು ಲೋಟ ಕುಡಿಯುವ ನೀರಿಗೂ ತಾತ್ವರವಿದೆ. ಇದು ಕಾಣಿಸುತ್ತಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.  ಬೆಂಗಳೂರಿನ ಜನ ಮನೆಯಲ್ಲಿ ಕುಳಿತರೆ ಆಗೋಲ್ಲ. ಬುದ್ದಿಜೀವಿಗಳು ಏನು ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ದೇವೇಗೌಡರು ಚಾಟಿ ಬೀಸಿದರು.

► Follow us on –  Facebook / Twitter  / Google+

Facebook Comments

Sri Raghav

Admin