ನೀವಿನ್ನೂ ಪಾನ್’ಗೆ ಆಧಾರ್ ಲಿಂಕ್ ಮಾಡಿಲ್ವಾ..? ಹಾಗಾದರೆ ಇದನ್ನೊಮ್ಮೆ ಓದಿಬಿಡಿ

Adhaar--01

ಕೇಂದ್ರ ಸರ್ಕಾರ ಭ್ರಷ್ಟಾಚಾರ ತಡೆಗೆ ಕಡಿವಾಣ ಹಾಕಲು ಮುಂದಾಗಿರುವ ಹಿನ್ನೆಲೆಯಲ್ಲಿ ಪಾನ್‍ಕಾರ್ಡ್ ದುರ್ಬಳಕೆಯನ್ನು ತಡೆಗಟ್ಟಲು ಇದೀಗ ಪಾನ್‍ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಆಧಾರ್ ನಂಬರ್ ಪಾನ್‍ನೊಂದಿಗೆ ಸಂಯೋಜಿಸದಿದ್ದರೆ ಪಾನ್‍ಕಾರ್ಡ್ ರದ್ದುಗೊಳ್ಳಲಿದೆ.   ಒಂದಕ್ಕಿಂತ ಅಧಿಕ ಪಾನ್‍ಕಾರ್ಡ್ ಹೊಂದಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಆಧಾರ್ ಸಂಖ್ಯೆ ಸಂಯೋಜನಾ ಅವಧಿಯನ್ನು ನೀಡಲಾಗಿದ್ದು , ಈ ಅವಧಿಯಲ್ಲಿ ಲಿಂಕ್ ಮಾಡದಿದ್ದರೆ ಅಂತಹ ಪಾನ್‍ಕಾರ್ಡ್ ರದ್ದಾಗಲಿವೆ.   ಪರ್ಮನೆಂಟ್ ಅಕೌಂಟ್ ನಂಬರ್(ಪ್ಯಾನ್)ಗೆ ಇದೀಗ ಆಧಾರ್‍ನ 12 ಸಂಖ್ಯೆಯನ್ನು ಸಂಯೋಜಿಸುವಂತೆ ಕೇಂದ್ರ ಸರ್ಕಾರ ಹೇಳಿರುವುದರಿಂದ ಈ ಪ್ರಕ್ರಿಯೆಗೆ ಈಗ ಚಾಲನೆ ದೊರೆತಿರುವುದಲ್ಲದೆ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿವೆ.

ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್‍ಗೆ ಸೇರಿಸಲು ಜುಲೈ 1ರಿಂದ ಕಡ್ಡಾಯ ಗೊಳಿಸಿದ್ದರೂ ಲಿಂಕ್ ಮಾಡಲು ಯಾವುದೇ ನಿಗದಿತ ದಿನಾಂಕವನ್ನು ಸರ್ಕಾರ ನೀಡಿ ಗಡುವು ವಿಧಿಸಿಲ್ಲ. ಹಾಗಾಗಿ ಜುಲೈ 1ರೊಳಗೆ ಪಾನ್‍ಗೆ ಆಧಾರ್ ಲಿಂಕ್ ಮಾಡುವ ತರಾತುರಿ ತೋರುವ ಅಗತ್ಯವಿಲ್ಲ.  ಕಳೆದ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ಪಾನ್‍ಗೆ ಆಧಾರ್ ಸಂಯೋಜನೆ ಮಾಡುವ ವಿಷಯವನ್ನು ಪ್ರಸ್ತಾಪಿಸಿತ್ತು. ಅದರ ಚರ್ಚೆ ನಡೆದು ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ.
ಹಣಕಾಸು ವಹಿವಾಟಿನ ದುರ್ಬಳಕೆಗೂ ಸಹ ಈ ಸಂಯೋಜನಾ ಕಾರ್ಯದಿಂದ ತಡೆ ಬೀಳಲಿದೆ ಎನ್ನಲಾಗಿದೆ.

ಲಿಂಕ್ ಮಾಡದಿದ್ದರೆ ಹೇಗೆ:

ಒಂದು ವೇಳೆ ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಸಂಯೋಜಿಸದೆ ಇದ್ದಲ್ಲಿ ಪಾನ್ ನಂಬರ್ ಅನೂರ್ಜಿತಗೊಳ್ಳಲಿದೆ. ಆಗ ಯಾವುದೇ ದೊಡ್ಡ ಹಣಕಾಸು ವಹಿವಾಟನ್ನು ನಡೆಸಲು ಅಸಾಧ್ಯ.

ಆನ್‍ಲೈನ್ ವ್ಯವಸ್ಥೆ:

ಈಗಾಗಲೇ ಪಾನ್ ಹೊಂದಿರುವವರು ಆನ್‍ಲೈನ್ ಮೂಲಕವೇ ಆಧಾರ್ ಸಂಖ್ಯೆಯನ್ನು ಸಂಯೋಜಿಸುವ ಕಾರ್ಯ ಮಾಡಬಹುದಾಗಿದ್ದು , ಈಗಾಗಲೇ 2.07 ಕೋಟಿ ತೆರಿಗೆದಾರರು ಆಧಾರ್ ಲಿಂಕ್ ಮಾಡಿದ್ದಾರೆ.   ಆದರೆ ದೇಶಾದ್ಯಂತ 115 ಕೋಟಿ ಜನ ಆಧಾರ್ ಸಂಖ್ಯೆ ಹೊಂದಿದ್ದರೆ ಪಾನ್‍ನ್ನು 25 ಕೋಟಿ ಜನ ಬಳಸುತ್ತಿದ್ದಾರೆ. ಈಗಾಗಲೇ ಲಿಂಕ್ ಮಾಡಿರುವುದರ ಅಂಕಿಅಂಶದಿಂದ ಒಟ್ಟಾರೆ ಪಾನ್ ಬಳಕೆದಾರರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಲಿಂಕ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಯಾವುದಕ್ಕೆ ಕಡ್ಡಾಯ:

ಬ್ಯಾಂಕ್ ಖಾತೆ ತೆರೆಯಲು, ತೆರಿಗೆ ರಿಟನ್ಸ್ ಸಲ್ಲಿಕೆ ವೇಳೆ ಹಾಗೂ ಒಂದು ನಿಗಿದಿತ ಮಿತಿ ದಾಟಿ ಹಣಕಾಸು ವ್ಯವಹಾರ ಮಾಡಲು ಪಾನ್ ಸಂಖ್ಯೆ ಕಡ್ಡಾಯವಾಗಿದೆ. ಹಾಗಾಗಿ ಪಾನ್‍ಗೆ ಆಧಾರ್ ಲಿಂಕ್ ಮಾಡುವುದರಿಂದ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಇನ್ನಿತರ ಹಲವಾರು ವ್ಯವಹಾರಗಳಿಗೆ ಪಾನ್ ಅತ್ಯವಶ್ಯಕವಾಗಿದೆ.

ಯಾರಿಗೆ ಅನ್ವಯ:

ಯಾರ್ಯಾರ ಬಳಿ ಪಾನ್ ಸಂಖ್ಯೆ ಇದೆಯೋ ಅವರೆಲ್ಲ ಪಾನ್ ಜೊತೆ ಆಧಾರ್ ಸಂಖ್ಯೆಯನ್ನು ಸಂಯೋಜಿಸಬೇಕು. ಒಂದು ವೇಳೆ ಪಾನ್ ಹೊಂದಿರುವವರು ಆದಾಯ ತೆರಿಗೆ ರಿಟನ್ಸ್ ಸಲ್ಲಿಸದಿದ್ದರೂ ಪಾನ್ ಜೊತೆ ಆಧಾರ್ ಸಂಯೋಜಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ಪಾನ್‍ಕಾರ್ಡ್ ಮಾನ್ಯತೆ ಕಳೆದುಕೊಳ್ಳಲಿದೆ. ಐದು ಸಾವಿರಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರ ನಡೆಸುವುದನ್ನು ಪಾನ್ ಇಲ್ಲದೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆದಾಯ ತೆರಿಗೆ ವ್ಯಾಪ್ತಿಗೆ ಬರದೆ ಇದ್ದರೂ ಪಾನ್ ಮತ್ತು ಆಧಾರ್‍ನ್ನು ಹೊಂದಿರುವ ಹಿರಿಯ ವಯಸ್ಕರು, ವಿದ್ಯಾರ್ಥಿಗಳು, ಗೃಹಿಣಿಯರು, ಸ್ವಯಂ ಉದ್ಯೋಗಿಗಳು ಪಾನ್ ಜೊತೆ ಆಧಾರ್ ಸಂಯೋಜನೆ ಮಾಡಲೇಬೇಕು.

ಆಧಾರ್ ಇಲ್ಲದಿದ್ದರೆ ರಿಯಾಯ್ತಿ: ಪಾನ್‍ಕಾರ್ಡ್ ಇದ್ದರೂ ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಸಂಯೋಜನೆ ಮಾಡುವುದು ಕಡ್ಡಾಯವಲ್ಲ.

ನಗದು ವ್ಯವಹಾರಕ್ಕೆ ಪಾನ್:  ಇತ್ತೀಚೆಗಷ್ಟೇ ನೋಟ್ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ 50 ಸಾವಿರ ರೂ. ಮೇಲ್ಪಟ್ಟ ವ್ಯವಹಾರಗಳಿಗೆ ಪಾನ್‍ಕಾರ್ಡ್ ಕಡ್ಡಾಯ ಮಾಡಲಾಗಿತ್ತು. ಪಾನ್ ಇಲ್ಲದವರು ನಿಗದಿತ ಫಾರಂ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.   ಮುಂದಿನ ಹಂತದಲ್ಲಿ 30 ಸಾವಿರ ರೂ. ಮೇಲ್ಪಟ್ಟ ವ್ಯವಹಾರಕ್ಕೆ ಪಾನ್ ಕಡ್ಡಾಯಗೊಳಿಸಲಿದೆ. ಪಾನ್ ಇಲ್ಲದವರು ಆಧಾರ್‍ಕಾರ್ಡ್ ಬಳಸುವ ಅವಕಾಶವೂ ಇದೆ ಎಂದು ಹೇಳಲಾಗಿದೆ.
ಅವಧಿ ವಿಸ್ತರಣೆ: ಜುಲೈ 1ರೊಳಗೆ ಪಾನ್‍ಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದೆ ಇದ್ದರೆ ಚಿಂತಿಸಬೇಡಿ. ಈ ಎರಡೂ ಕಾರ್ಡ್‍ಗಳನ್ನು ಲಿಂಕ್ ಮಾಡುವ ಅವಧಿಯನ್ನು ವಿಸ್ತರಿಸಲಾಗಿದೆ.   ಪಾನ್ ರದ್ದು ಮಾಡುವ ಅಧಿಕಾರವನ್ನು ಸಿಬಿಡಿಟಿಗೆ ನೀಡಲಾಗಿತ್ತು. ಇದರ ಅಧ್ಯಕ್ಷ ಸುಶೀಲ್‍ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿ ಯಾರು ಗಾಬರಿಗೊಳ್ಳುವ ಅಗತ್ಯವಿಲ್ಲ. ಜೂ.30ರ ಬಳಿಕ ಪಾನ್‍ಕಾರ್ಡ್‍ಗಳು ರದ್ದಾಗುವುದಿಲ್ಲ. ಈ ಎರಡು ಕಾರ್ಡ್‍ಗಳನ್ನು ಲಿಂಕ್ ಮಾಡುವ ಪ್ರಕ್ರಿಯೆಗೆ ಶೀಘ್ರದಲ್ಲಿ ಅಂತಿಮ ದಿನಾಂಕ ಪ್ರಕಟಿಸಲಾಗುವುದು. ಇಲಾಖೆ ಘೋಷಿಸಿದ ದಿನಾಂಕದ ಬಳಿಕವೂ ಲಿಂಕ್ ಆಗದಿದ್ದರೆ ಪಾನ್ ರದ್ದಾಗಲಿದೆ ಎಂದಿದ್ದಾರೆ.
ಜುಲೈ 1ರಿಂದ ಪಾನ್‍ಕಾರ್ಡ್‍ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಬಹಳಷ್ಟು ಜನ ಆಧಾರ್ ಜೋಡಿಸುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ. ಕೇವಲ ಒಂದೇ ನಿಮಿಷದೊಳಗೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್‍ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
1. www.incometaxindiaefiling.gov.in ಪೋರ್ಟಲ್‍ಗೆ ಹೋಗಿ.
2. ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್‍ಪೇಜ್‍ನ ಎಡಗಡೆ ಸರ್ವೀಸಸ್ ಎನ್ನುವ ವಿಭಾಗವಿದೆ. ಇದರಲ್ಲಿ ಮೇಲುಗಡೆ `ಲಿಂಕ್ ಆಧಾರ್’ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ.
3. ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪ್ ಮಾಡಿ, ನಂತರ ಅಲ್ಲೇ ನೀಡಲಾಗಿರುವ ಕ್ಯಾಪ್ಟಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಟಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪ್ ಮಾಡಿದ ಬಳಿಕ ಕೆಳಗಡೆ ಹಸಿರು ಬಾಕ್ಸ್‍ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು.
4. ನೀವು ಟೈಪ್ ಮಾಡಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್ ಸರಿಯಾಗಿದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಬರುತ್ತದೆ. ಒಂದು ವೇಳೆ ಈ ಸಂದೇಶ ಬರದಿದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin