ನೆರೆಮನೆಯಾಕೆಯನ್ನು ನಂಬಿ ಕೊಲೆಯಾದ ಮಹಿಳೆ

Spread the love

Murder-021

ಮೈಸೂರು, ಆ.28- ಬೆಂಗಳೂರಿನಿಂದ ನೆರೆಮನೆಯ ಮಹಿಳೆಯನ್ನು ಪ್ರವಾಸದ ನೆಪದಲ್ಲಿ ಮೈಸೂರಿಗೆ ಕರೆತಂದು ವಿವಿಧೆಡೆ ಸುತ್ತಾಡಿಸಿ ಮರುದಿನ ಕೊಲೆ ಮಾಡಿ ಮೈ ಮೇಲಿದ್ದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಖತರ್ನಾವಕ್ ಯುವತಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಘಟನೆ ವಿವರ: 
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ವೆಂಕಟಯ್ಯ ಎಂಬುವರ ಪತ್ನಿ ತಿಮ್ಮವ್ವ (53)ಅವರನ್ನು ನೆರೆಮನೆಯಾಕೆ ಸರೋಜ (ಹೆಸರು ಬದಲಾಯಿಸಿದೆ) ಪ್ರವಾಸದ ನೆಪವೊಡ್ಡಿ ಆ.25ರಂದು ರೈಲಿನಲ್ಲಿ ಮೈಸೂರಿಗೆ ಕರೆತಂದಿದ್ದಾಳೆ. ಇತ್ತ ತಿಮ್ಮವ್ವ ಅವರ ಪತಿ ವೆಂಕಟಯ್ಯ ಪತ್ನಿ ಕಾಣೆಯಾಗಿರುವ ಬಗ್ಗೆ ಮಹಾಲಕ್ಷ್ಮಿಪುರ ಬಡಾವಣೆಯ ಸಬ್ಇನ್ಸ್ಪೆಕ್ಟರ್ ಬಸವರಾಜು ಅವರಿಗೆ ದೂರು ನೀಡಿ, ಪತ್ನಿ ಮನೆಯಿಂದ ಹೊರಗೆ ಹೋಗುವಾಗ ಮೈಮೇಲೆ ಆಭರಣ ಧರಿಸಿದ್ದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಇವರ ಮನೆ ಬಳಿ ಬಂದು ನೆರೆ ಹೊರೆಯವರನ್ನು ವಿಚಾರಿಸಲಾಗಿ ಯುವತಿ ಜತೆ ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದಾರೆ.
ಈ ಮಾಹಿತಿ ಮೇರೆಗೆ ಯುವತಿಯ ಮೊಬೈಲನ್ನು ಪೊಲೀಸರು ಟ್ರೇಸ್ ಮಾಡಿದಾಗ ಮೈಸೂರಿನಲ್ಲಿರುವುದು ಗೊತ್ತಾಗಿದೆ. ಈ ವಿಷಯವನ್ನು ವೆಂಕಟಯ್ಯ ಅವರಿಗೆ ತಿಳಿಸಿದ್ದು, ನಿಮ್ಮ ಮೈಸೂರಿನಲ್ಲಿದ್ದಾರೆ ಹೋಗಿರುವ ಯುವತಿಯೊಂದಿಗೆ ಬರಬಹುದೆಂದು ಅವರಿಗೆ ಧೈರ್ಯ ಹೇಳಿದ್ದಾರೆ. ಅತ್ತ ದಿನವಿಡೀ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ತಿಮ್ಮವ್ವ ಅವರ ನಂಬಿಕೆಗಳಿಸಿ ಮರು ದಿನ ಮೈಸೂರಿನಿಂದ ಮಂಡ್ಯಾಕ್ಕೆ ಬಸ್ನಲ್ಲಿ ಕರೆದೊಯ್ದ ಈ ಚಾಲಾಕಿ ಯುವತಿ ನಗರದ ಹೊರ ವಲಯದಲ್ಲಿ ತಿಮ್ಮವ್ವ ಅವರನ್ನು ಕೊಲೆ ಮಾಡಿ ಮೈ ಮೇಲಿದ್ದ ಆಭರಣ ಹಾಗೂ ಹಣ ಕಿತ್ತುಕೊಂಡು ಏನೂ ಗೊತ್ತಿಲ್ಲದಂತೆ ಬೆಂಗಳೂರಿಗೆ ವಾಪಸಾಗಿದ್ದಾಳೆ.

ಎರಡು ದಿನಗಳಾದರೂ ಪತ್ನಿ ಮನೆಗೆ ಬಾರದಿರುವುದರಿಂದ ವೆಂಕಟಯ್ಯ ಪುನಃ ಠಾಣೆಗೆ ಹೋಗಿ ವಿಚಾರಿಸಿದಾಗ ಪೊಲೀಸರು ಮತ್ತೆ ಯುವತಿಯ ಮೊಬೈಲ್ ಟ್ರೇಸ್ ಮಾಡಿದಾಗ ಬೆಂಗಳೂರಿನಲ್ಲಿರುವುದು ತಿಳಿದು ಬಂದಿದೆ. ತಕ್ಷಣ ಪೊಲೀಸರು ನೆರೆಮನೆಯವರು ಹೇಳಿದ ಯುವತಿಯ ಮನೆಗೆ ಬಂದು ಆಕೆಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ನಿನ್ನೆ ಪೊಲೀಸರು ಈ ಯುವತಿಯನ್ನು ಮಂಡ್ಯಾಕ್ಕೆ ಕರೆದೊಯ್ದಿದ್ದು ಕೊಲೆ ಮಾಡಿದ್ದ ಸ್ಥಳ ಪರಿಶೀಲಿಸಿ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಇಂದು ಬೆಂಗಳೂರಿಗೆ ತರುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin