ನೇಣು ಬಿಗಿದುಕೊಂಡು ಬಿಬಿಎಂಪಿ ರೆವಿನ್ಯೂ ಇನ್‍ಸ್ಪೆಕ್ಟರ್ ಆತ್ಮಹತ್ಯೆ

Spread the love

BBMP-Suicide-Revenue-Inspec

ಬೆಂಗಳೂರು, ಜ.17- ಬಿಬಿಎಂಪಿಯ ರೆವಿನ್ಯೂ ಇನ್‍ಸ್ಪೆಕ್ಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಗರದ ಜಲಗೆರೆಯಮ್ಮ ದೇವಸ್ಥಾನ ಸಮೀಪ, 2ನೆ ಮುಖ್ಯರಸ್ತೆ, 4ನೆ ಕ್ರಾಸ್‍ನ ವಾಸಿ ಶ್ರೀನಿವಾಸ್ (45) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ನಾಗಮಂಗಲದವರಾದ ಶ್ರೀನಿವಾಸ್ ಬಿಬಿಎಂಪಿಯಲ್ಲಿ ರೆವಿನ್ಯೂ ಇನ್ಸ್‍ಪೆಕ್ಟರ್ ಆಗಿದ್ದು, ನಿನ್ನೆ ಸಂಜೆ 4.30 ರಿಂದ 5 ಗಂಟೆ ನಡುವೆ ಮನೆಯಲ್ಲಿ ಫ್ಯಾನ್‍ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಮನೆಯವರು ಕೂಡಲೇ ನೇಣಿನಿಂದ ಇಳಿಸಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೆಂಪೇಗೌಡನಗರ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆ ಆಗಿತ್ತು.

ಶ್ರೀನಿವಾಸ್ ಅವರ ಆತ್ಮಹತ್ಯೆ ಬಗ್ಗೆ ದೂರು ದಾಖಲಾದ ನಂತರ ಸ್ಥಳ ಪರಿಶೀಲನೆ ವೇಳೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಮನೆಯವರು ನಮಗೆ ಯಾವುದೇ ಡೆತ್‍ನೋಟ್ ಕೊಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲವಾದರೂ ಮನೆಯವರು ಪದೇ ಪದೇ ವರ್ಗಾವಣೆಯಾಗುತ್ತಿದ್ದರಿಂದ ಮನನೊಂದಿದ್ದರು. ಇದರಿಂದ ಸಾವಿಗ ಶರಣಾಗಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.

ಸಂಬಂಧಿಯ ಆರೋಪ:
ಸ್ಥಳೀಯ ಜನಪ್ರತಿನಿಧಿಯ ಕಿರುಕುಳದಿಂದ ಆರ್‍ಐ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಸಂಬಂಧಿ ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಜೆಪಿ ನಗರದಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರನ್ನು ಒಂದು ತಿಂಗಳ ಹಿಂದೆ ಕೆಂಪೇಗೌಡನಗರಕ್ಕೆ ವರ್ಗ ಮಾಡಲಾಗಿತ್ತು. 15 ದಿನ ಕಳೆಯುವುದರಲ್ಲೇ ರಾಜರಾಜೇಶ್ವರಿ ನಗರಕ್ಕೆ ವರ್ಗವಾಗಿತ್ತು. ಆರ್‍ಆರ್ ನಗರದಲ್ಲಿ ಇನ್ನೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ಅವರು ಮಾಧ್ಯಮಗಳಲ್ಲಿ ದೂರಿದ್ದಾರೆ.

ನೌಕರರ ಪ್ರತಿಭಟನೆ:
ನೌಕರರ ವರ್ಗಾವಣೆ ವೇಳೆ ರಾಜಕೀಯ ಒತ್ತಡಗಳು ಸಾಮಾನ್ಯ. ಇದರಿಂದ ಅಧಿಕಾರಿಗಳು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತಾಗುತ್ತದೆ. ಇನ್ನು ಮುಂದೆ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದು ಎಂದು ಆಗ್ರಹಿಸಿ ಬಿಬಿಎಂಪಿ ನೌಕರರ ಸಂಘದ ಪದಾಧಿಕಾರಿಗಳು ಕಿಮ್ಸ್ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin