ನೇಮಿನಾಥ ಜೈನ ತೀರ್ಥಂಕರರ ಮೂರ್ತಿಯ ರುಂಡ-ಮುಂಡ ಪತ್ತೆ

neminath
ದಾಬಸ್‍ಪೇಟೆ, ಸೆ.27– ನೆಲಮಂಗಲ ತಾಲ್ಲೂಕಿನ ಯಾವುದೇ ಭಾಗದತ್ತ ಕಣ್ಣಾಯಿಸಿದರೂ ಗತಿಸಿರುವ ಇತಿಹಾಸಗಳದ್ದೇ ಕಾರುಬಾರು. ಇಲ್ಲಿನ ಭೂಗರ್ಭದೊಳಗೆ ಹುದುಗಿರುವ ಅದೆಷ್ಟೋ ಸ್ಥಳ ಪುರಾಣ ಪ್ರಸಿದ್ಧತೆ, ಐತಿಹಾಸಿಕ ಹಿನ್ನೆಲೆ ಹಾಗೂ ರೌದ್ರ ರಮಣೀಯ ಇತಿಹಾಸ ಪ್ರಕಾರಗಳು ಎಳೆ ಎಳೆಯಾಗಿ ತೆರೆದುಕೊಳ್ಳುತ್ತಿವೆ.ಇಲ್ಲಿನ ಇತಿಹಾಸವನ್ನು ಕೆರಳಿಸುವಂತೆ ಕೆಲವು ವರ್ಷಗಳ ಹಿಂದೆ ಹಗೇವ್‍ವೊಂದರಲ್ಲಿ ನೇಮಿನಾಥ ತೀರ್ಥಂಕರರ ಮೂರ್ತಿಯ ರುಂಡ ಭಾಗವು ಸಿಕ್ಕಿತ್ತು. ಈಗ ರಸ್ತೆಗಾಗಿ ಅಗೆಯುವಾಗ ಇದರ ಮುಂಡ ಭಾಗವು ಜೆಸಿಬಿ ಯಂತ್ರದ ಬಾಯಿಗೆ ಸಿಕ್ಕಿ ಹೊರ ಬಂದಿದೆ.ಇದು ನೇಮಿನಾಥ ತೀರ್ಥಂಕರರ ಮೂರ್ತಿಯೇ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್.ಎಸ್.ಗೋಪಾಲ ರಾವ್ ಸ್ಪಷ್ಟಪಡಿಸಿದ್ದಾರೆ.

neminath2
ಹಿಂದೆ ಇಲ್ಲಿನ ಯುವರಾಜ ಶಿವರಾಜ ಮಾರಸಿಂಹನ ಆಳ್ವಿಕೆಯಲ್ಲಿ ಅಧಿಕಾರಿಯಾಗಿದ್ದ ಶ್ರೀ ವಿಜಯನು ಮಾನ್ಯಪುರ (ಮಣ್ಣೆ)ದಲ್ಲಿ ಕಟ್ಟಿಸಿದ್ದ ಜಿನಾಲಯದಲ್ಲಿ ನೇಮಿನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರೂ ಇದನ್ನು ಸಮರ್ಥಿಸುವಂತೆ ಸದ್ಯ ಉಳಿದಿರುವ ಜಿನಾಲಯದ (ದೇವಾಲಯ) ನವರಂಗದ ಒಳ ಛಾವಣಿಯಲ್ಲಿ (ಭುವನೇಶ್ವರಿ) ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ಯಕ್ಷಿಯ ಮೂರ್ತಿಗಳಿವೆ.ಈ ಬಸದಿಯಲ್ಲಿ ಮೂರ್ತಿಯ ಪ್ರತಿಷ್ಠಾಪನೆಯಾದದ್ದು ಕ್ರಿ.ಶ. 5-6-797ಆಗಿದೆ. ಇದೇ ಬಸದಿಗೆ ಕ್ರಿ.ಶ.802ರಲ್ಲಿ ರಾಷ್ಟ್ರಕೂಟರದೊರೆ ನಿರುಪಮ ದೇವ/ ಗೋವಿಂದನು ಇಲ್ಲಿ ನಡೆಯುವ ಮತ್ತು ನಡೆಯಬಹುದಾದ ರಂಗ ಭೋಗ ಸೇವೆಗಾಗಿ ಪೆಲ್ವಡಿಯೂರು ಎಂಬ ಗ್ರಾಮವನ್ನು ದಾನವಾಗಿ ನೀಡಿದ್ದ. ಈ ವಿಷಯವನ್ನು ಕ್ರಿ.ಶ.724ಕ್ಕೆ ಸಂಬಂಧಿಸಿದ್ದ ತಾಮ್ರ ಶಾಸನದಲ್ಲಿ ಉಲ್ಲೇಖಿಸಲಾಗಿದೆ.ಬಹುತೇಕ ತನ್ನ ಸ್ವರೂಪವನ್ನು ಕಳೆದುಕೊಂಡಿದ್ದರೂ ಆ ಬಸದಿಯಲ್ಲಿ ರಂಗ ಭೋಗ ಸೇವೆ ಆಗುತ್ತಿದ್ದುದರ ನೆನಪಿಗಾಗಿ ಇಂದಿಗೂ ಗ್ರಾಮಸ್ಥರು ಈ ಜೈನ ಬಸದಿಯನ್ನು ಸೂಳೆಯರ ಗುಡಿ ಎನ್ನುತ್ತಾರೆ.

1997-98ರಲ್ಲಿ ನೆಲಮಂಗಲದ ಸಿದ್ದಗಂಗಾ ಪದವಿ ಕಾಲೇಜು ಮತ್ತು ತ್ಯಾಮಗೊಂಡ್ಲುವಿನ ಸರ್ಕಾರಿ ಪಿಯು ಕಾಲೇಜು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಗ್ರಾಮದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಿ ಕೆಲಸ ನಡೆದಿದ್ದಾಗ ಸ್ಥಳೀಯರೊಬ್ಬರ ಸೂಚನೆಯಂತೆ ಇದೇ ಬಸದಿಯ ಮುಂದೆ ಹಗೇವೊಂದರಲ್ಲಿ ಹೂತು ಹೋಗಿದ್ದ ತೀರ್ಥಂಕರರ ರುಂಢ ಭಾಗವು ಸಿಕ್ಕಿತ್ತು. ಉಳಿದ ಭಾಗದ ಹುಡುಕಾಟ ಮುಂದುವರೆದಿತ್ತಾದರೂ ಲಭ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಗ್ರಾಮದಲ್ಲಿ ಹೊಸದಾಗಿ ಒಂದು ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಚರಂಡಿಗಾಗಿ ಜೆಸಿಬಿ ಯಂತ್ರದ ಮೂಲಕ ಅಗೆದ ಒಂದು ಸ್ಥಳದಲ್ಲಿ ತೀರ್ಥಂಕರರ ಮುಂಡ ಭಾಗವೂ ಲಭ್ಯವಾಗಿದೆ. ವಿಗ್ರಹದ ಪೀಠ ಭಾಗ ಉಳಿದಿದ್ದರೂ ಕೈಗಳು ಮತ್ತು ಕಾಳುಗಳು ಭಗ್ನವಾಗಿವೆ. ಇದು ಈ ಹಿಂದೆ ದೊರೆತಿದ್ದ ತೀರ್ಥಂಕರ ರುಂಡಕ್ಕೆ ಸರಿ ಹೊಂದುತ್ತದೆ.ಆದ್ದರಿಂದ ಇದು ನೇಮಿನಾಥ ತೀರ್ಥಂಕರರ ಮೂರ್ತಿಯೇ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್.ಎಸ್.ಗೋಪಾಲರಾವ್ ಖಚಿತ ಪಡಿಸಿದ್ದಾರೆ.ಈಗಾಗಲೇ ಪತ್ತೆಯಾಗಿದ್ದ ನೇಮಿನಾಥ ತೀರ್ಥಂಕರರ ರುಂಡವನ್ನು ಮಣ್ಣೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಇರಿಸಲಾಗಿದ್ದು, ಅದರೊಟ್ಟಿಗೆ ಈಗ ಸಿಕ್ಕಿರುವ ಮುಂಡ ಭಾಗವನ್ನೂ ಇರಿಸಿ ಸಂರಕ್ಷಿಸಬೇಕಿದೆ.
‘ಆಗ್ರಹ:

ಭಗ್ನಗೊಂಡು ಭಿನ್ನವಾಗಿರುವ ಉಳಿದ ಭಾಗಗಳು ಹೀಗೆಯೇ ಭೂಮಿಯ ಒಳಗೆ ಹುದುಗಿ ಹೋಗಿರುವ ಸಾಧ್ಯತೆಗಳಿದ್ದು, ಇವುಗಳನ್ನೆಲ್ಲಾ ಪತ್ತೆ ಮಾಡಿ ಸಂರಕ್ಷಿಸಿ ಗಂಗರ ಒಂದು ಪ್ರಮುಖ ನೆಲೆಯಾಗಿದ್ದ ಮಣ್ಣೆಯಲ್ಲಿ ಅಸ್ತಿಪಂಜರದ ರೂಪಾದಿಯಲ್ಲಿ ಉಳಿದಿರುವ ಮತ್ತು ಭೂಮಿಯಲ್ಲಿ ಹುದುಗಿ ಹೋಗಿರುವ ಸ್ಮಾರಕಗಳು ಹಾಗೂ ಐತಿಹಾಸಿಕ ಅವಶೇಷಗಳನ್ನು ಸಂರಕ್ಷಿಸುವ ಕೆಲಸವು ಅತಿ ತುರ್ತಾಗಿ ಆಗಬೇಕಿದೆ.

ಚಿಕ್ಕರಾಜು, ದಾಬಸ್‍ಪೇಟೆ

 

► Follow us on –  Facebook / Twitter  / Google+

Sri Raghav

Admin