ನೋಟ್ ಬ್ಯಾನ್ ಎಫೆಕ್ಟ್ :ರೈತರ ಸಂತೆಯಲ್ಲಿ ತರಕಾರಿ ಬೆಲೆ ಗಣನೀಯ ಕುಸಿತ

market

ಯಲಹಂಕ, ನ.17- ರೈತರ ಸಂತೆಯಲ್ಲಿ ದಲ್ಲಾಳಿಗಳ ಪಾರುಪತ್ಯ ಹೆಚ್ಚಾಗಿದೆ, ಸ್ಥಳೀಯ ರೈತರ ನೆರವಿಗಾಗಿ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲಾಗಿದ್ದು, ಹಳೆಯ ನೋಟುಗಳ ಚಲಾವಣೆ ರದ್ದತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2-3 ದಿನಗಳಿಂದ ಗ್ರಾಹಕರಿಲ್ಲದೆ ಸೊರಗಿದ್ದು, ಮಾರುಕಟ್ಟೆ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಿಂದ ವ್ಯಾಪಾರಸ್ಥರು ಬರುತ್ತಿದ್ದರು. ದಿನಂಪ್ರತಿ ಸುಮಾರು 3 ರಿಂದ 4 ಕೋಟಿ ವ್ಯವಹಾರ ನಡೆಯುತ್ತಿದ್ದ ರೈತರ ಸಂತೆ ಸ್ಥಳೀಯ ಬಾಗಲೂರು ಮತ್ತು ರಾಜಾನುಕುಂಟೆ ಮಾರುಕಟ್ಟೆಗಳಿಗೂ ವಸ್ತುಗಳು ಸಬರಾಜಾಗುತ್ತಿತ್ತು. ವೇಗದಲ್ಲಿ ಬೆಳೆಯುತ್ತಿರುವ ಯಲಹಂಕ ಸುತ್ತಮುತ್ತಲ ಜನರಿಗೆ ಮತ್ತು ದಿನಸಿ ಅಂಗಡಿ ವ್ಯಾಪಾರಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ಇದೀಗ ನೋಟು ಬದಲಾವಣೆಯನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು 1000 ರೂಗಳಿಗೆ 800ರೂ. ನಂತೆ ಚಿಲ್ಲರೆ ಬಿಡುತ್ತಿರುವುದು ಮತ್ತು ಚಿಲ್ಲರೆ ನೆಪ ಒಡ್ಡಿ ತರಕಾರಿಗಳನ್ನು ಕಡಿಮೆ ಬೆಲೆಗೆ ಹರಾಜು ಕೂಗುವುದು ಸೇರಿ ರೈತರಿಗೆ ಮತ್ತು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೆಲ್ಲಾ ಸಹಕಾರ ಮಂಡಳಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಸಣ್ಣ ರೈತರು ಮತ್ತು ತರಕಾರಿ ವ್ಯಾಪಾರಿಗಳು. ಇದರಿಂದ ರೈತನ ಜೇಬು ತುಂಬುತ್ತಿಲ್ಲ, ಗ್ರಾಹಕನ ಹಸಿವೂ ನೀಗುತ್ತಿಲ್ಲ. ಆದರೆ ದಲ್ಲಾಳಿಗಳ ಜೇಬು ಮಾತ್ರ ಬರಪೂರ ತುಂಬುತ್ತಿದೆ ಎನ್ನಲಾಗಿದ್ದು, ರೈತರು ತರಕಾರಿಗಳನ್ನು ತರುವುದೇ ವಿರಳ ವಾಗುತ್ತಿದೆ. ದಿನಂಪ್ರತಿ 3 ರಿಂದ 4ಕೋಟಿಯಷ್ಟು ವ್ಯವಹಾರ ನಡೆಯುತ್ತಿದ್ದ ಯಲಹಂಕ ರೈತರ ಸಂತೆ ಇದೀಗ ಗಣನೀಯ ಕುಸಿತ ಕಂಡಿದ್ದು ಕಳೆದ ಎರಡು ದಿನಗಳಲ್ಲಿ ಕೇವಲ 80 ರಿಂದ 90 ಲಕ್ಷಗಳಷ್ಟು ವಹಿವಾಟು ನಡೆದಿದೆ ಎನ್ನಾಲಾಗುತ್ತಿದೆ. ಹಳೆ ನೋಟುಗಳಿಂದಾಗಿ ಕೆಲ ರೈತರು ತರಕಾರಿಗಳನ್ನು ಸಾಲ ನೀಡಿ ಹಿಂದಿರುಗುತ್ತಿದ್ದರೆ, ಇನ್ನೂ ಕೆಲಸವರು ಖರೀದಿದಾರರಿಲ್ಲದೆ ಹಗಲಿರುಳು ಅಲ್ಲೆ ವಾಸ್ಥವ್ಯ ಹೂಡಿದ್ದಾರೆ.ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ವರ್ತಕರು ಮತ್ತು ದಲ್ಲಾಳಿಗಳು ತರಕಾರಿಗಳನ್ನು ಮನಸ್ಸಿಗೆ ಬಂದ ಬೆಲೆ ನಿಗದಿ ಪಡಿಸಿ ರೈತರಿಗೆ ಪುಡಿಗಾಸು ನೀಡಿ, ಕಮಾಯಿಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗ್ರಾಹಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗಿದ್ದು ಬರುವ ಚಿಲ್ಲರೆ ವ್ಯಾಪಾರಿಗಳು ಮತ್ತು ದಿನಸಿ ಅಂಗಡಿಯವರಿಗೆ ಸಾಲದ ರೀತ್ಯ ಪದಾರ್ಥ ನೀಡುತ್ತಿದ್ದಾರೆ.
ಗ್ರಾಹಕರ ಮತ್ತು ರೈತರ ನಡುವಿನ ಈ ಪರದೆ ಸರಿಯುವುದಾದರೂ ಯಾವಾಗ, ದೇಶದ ಬೆನ್ನೆಲುಬು ಅನ್ನದಾತನ ಗೋಳು ಕೇಳುವವರಾದರೂ ಯಾರು ಎಂಬ ಪ್ರಶ್ನೆ ಕಾಡುತ್ತಿದ್ದು, ರೈತರು ಕೊರಗುತ್ತಾ ರಾಮರಾಜ್ಯ ಬಂದರೂ ರಾಗಿಬೀಸುವ ಕೆಲಸ ತಪ್ಪದು ಎಂಬ ಗಾದೆ ಮಾತಿನಂತೆ ಒದ್ದೆ ಕಣ್ಣುಗಳಲ್ಲೆ ಮನೆಗಳಿಗೆ ತೆರಳುತ್ತಿದ್ದಾರೆ. ಸುಮಾರು ಒಂದು ಎಕ್ಕರೆ ಜಾಗದಲ್ಲಿ ಇರುವ ನೀರಲ್ಲೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಬದನೇಕಾಯಿ ಬೆಳೆದ್ದೇನೆ. ತರಬನಹಳ್ಳಿಯಿಂದ ಇಲ್ಲಿಗೆ ಒಂದು ಚೀಲ ಬದನೇಕಾಯಿ ತರಲು 12ರೂ ಲಗೇಜು ನೀಡಿದ್ದೇನೆ, ಬೆಳೆ ಬೆಳೆಯಲಿಕ್ಕೆ ಒಟ್ಟು ಖರ್ಚು ಸುಮಾರು 80 ಸಾವಿರದಷ್ಟಾಗಿದೆ. ಆದರೆ ಬದನೇಕಾಯಿ ಒಂದು ಚೀಲ 80ರೂ ಗೆ ಮಾರಾಟವಾಗಿದ್ದು, ತಂದಿದ್ದ 50ಚೀಲದಲ್ಲಿ 36 ಚೀಲ ಸಾಲದ ರೂಪದಲ್ಲಿ ನೀಡಿ ಹಣಕ್ಕಾಗಿ ಚಿಲ್ಲರೆ ವ್ಯಾಪಾರಿಗಳ ಬಳಿ ಪಡೆದುಕೊಳ್ಳುತ್ತಿದ್ದೇನೆ. ಅವರು ಮಾರಿ ಬಂದ ಹಣದಿಂದ ನನಗೆ 80ರೂ ನಂತೆ ಹಣ ಹಿಂದಿರುಗಿಸುತ್ತಿದ್ದಾರೆ. ಅದರಲ್ಲೂ ಕೆಲವರು 500- 1000 ರೂ. ಮುಖ ಬೆಲೆಯ ನೋಟುಗಳನ್ನೇ ನೀಡುತ್ತಿದ್ದು, ತುಂಬಾತೊಂದರೆ ಆಗುತ್ತಿದೆ. ಉಳಿದ ತರಕಾರಿಯನ್ನು ಅಲ್ಲೆ ಬಿಟ್ಟರೆ ಕನಿಷ್ಠ ಗೊಬ್ಬರವಾದರೂ ಆದೀತೆಂಬ ಚಿಂತನೆಯಲ್ಲಿದ್ದೇನೆ ಎನ್ನುತ್ತಾರೆ ತರಬನಹಳ್ಳಿ ರೈತ ಮಹೇಶ.ಇದು ರೈತ ಮಹೇಶನೊಬ್ಬನ ವ್ಯಥೆಯಲ್ಲ. ಬಹುತೇಕ ರೈತರ ಪಾಡು ಇದೇ ಆಗಿದೆ. ಕೂಡಲೇ ಸಹಕಾರ ಮಂಡಳಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ನಿವಾರಿಸುವುದು ಅತ್ಯಗತ್ಯವಾಗಿದೆ.

 

► Follow us on –  Facebook / Twitter  / Google+

Sri Raghav

Admin