ನೋಟ್ ಬ್ಯಾನ್ ಎಫೆಕ್ಟ್ : ಸೀರಿಸ್ ನಂಬರ್ ಹವ್ಯಾಸಿ ಉದ್ಯಮಿಗೂ ಬಂತು ಕುತ್ತು ..!
ಜೋಧ್ಪುರ, ನ.16-500 ಹಾಗೂ 1000 ಮುಖಬೆಲೆಯ ನೋಟು ಬ್ಯಾನ್ನಿಂದಾಗಿ ದೇಶಾದ್ಯಂತ ಜನ ಸಹಜವಾಗಿ ವ್ಯವಹರಿಸಲು ಕಷ್ಟಪಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದರಿಂದ ವಿಶೇಷ ಸಂಖ್ಯೆಯ ನೋಟು ಸಂಗ್ರಹದಂತಹ ಹವ್ಯಾಸ ಬೆಳೆಸಿಕೊಂಡಿದ್ದ ಉದ್ಯಮಿಯೊಬ್ಬರು ಸಂಕಷ್ಟಕ್ಕೀಡಾಗಿದ್ದಾರೆ. ನೋಟು ರದ್ದಾದ ನಂತರ ದೇಶದ ಮೂಲೆ ಮೂಲೆಗಳಿಂದ ತರಹೇವಾರಿ ಸ್ಟೋರಿಗಳು ಹೊರ ಬರುತ್ತಿವೆ. ಅನೇಕ ಕಾಳಧನಿಕರು ಹಣ ಕಳೆದುಕೊಂಡು ಸಂಕಟಪಡುತ್ತಿದ್ದಾರೆ. ಕೆಲ ಶ್ರೀಮಂತರು ಭಿಕ್ಷುಕರು ಮುಂದೆ ಚಿಲ್ಲರೆಗಾಗಿ ಸಾಲುಗಟ್ಟಿ ನಿಂತಿದ್ದು, ನದಿಗಳಲ್ಲಿ 500 ಸಾವಿರದ ನೋಟುಗಳು ತೇಲಿ ಹೋಗಿದ್ದು, ಕಸದ ಬುಟ್ಟಿಯಲ್ಲಿ 500 ಸಾವಿರದ ಕೋಟ್ಯಾಂತರ ಮೊತ್ತದ ನೋಟು ಸಿಕ್ಕಿದ್ದು, ಇವೆಲ್ಲಾ ನೋಟು ಬ್ಯಾನ್ನಿಂದ ಎಫೆಕ್ಟ್.
ಆದರೀಗ ಇಲ್ಲಿ ಹೇಳ ಹೊರಟಿರುವುದು ಹವ್ಯಾಸಕ್ಕಾಗಿ ವಿಶೇಷ ಸಂಖ್ಯೆಯ ನೋಟು ಸಂಗ್ರಹಿಸಿಟ್ಟಿದ್ದ ಉದ್ಯಮಿಯ ಕತೆ. ಜೋಧಪುರದಲ್ಲಿ ಕೇಬಲ್ ವ್ಯವಹಾರ ನಡೆಸುತ್ತಿದ್ದ ಶಾಂತಿ ಸ್ವರೂಪ್ ಎಂಬ ಉದ್ಯಮಿ ನೋಟಿನ ನಂಬರ್ ಸರಣಿಯ ಅಂತ್ಯದಲ್ಲಿ 786 ಎಂಬ ಸಂಖ್ಯೆ ಬರುವ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಹಲವು ವರ್ಷಗಳಿಂದ ಇವರು ನೋಟಿನ ಕೊನೆಯಲ್ಲಿ 786 ಸಂಖ್ಯೆ ಇರುವ ಬೇರೆ ಬೇರೆ ಮೌಲ್ಯಗಳಿರುವ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಹೀಗಾಗಿ ಇವರು ಸಂಗ್ರಹಿಸಿದ ಈ ಸೀರಿಸ್ ನಂಬರ್ ಇರುವ ಹಣ ಏಳೂವರೆ ಲಕ್ಷದಷ್ಟು ಸಂಗ್ರಹವಾಗಿತ್ತು. ಇದರಲ್ಲಿ 4.5 ಲಕ್ಷ ಮೊತ್ತದಷ್ಟು ನೋಟುಗಳು 1000 ರೂಪಾಯಿಯದ್ದಾಗಿದೆ. ನೋಟ್ ಬ್ಯಾನ್ನಿಂದಾಗಿ ಈಗ ಸಾವಿರ ರೂಪಾಯಿ ನೋಟಿಗೆ ಬೆಲೆ ಇಲ್ಲದಾಗಿದ್ದು, ಉದ್ಯಮಿ ಶಾಂತಿ ಸ್ವರೂಪ್ 4.5 ಲಕ್ಷ ರೂ ಹಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನೋಟ್ ಬ್ಯಾನ್ನಿಂದಾಗಿ ನನ್ನ ಇಷ್ಟು ವರ್ಷದ ಪರಿಶ್ರಮ ನಾಶವಾಗಿದೆ ಎಂದು ಉದ್ಯಮಿ ಶಾಂತಿ ಸ್ವರೂಪ್ ಅವಲತ್ತುಕೊಂಡಿದ್ದಾರೆ.