ನ್ಯಾಯಮೂರ್ತಿ ಕರ್ಣನ್‍ ಅವರನ್ನು ಜೈಲಿಗಟ್ಟುವಂತೆ ಸುಪ್ರೀಂ ಮಹತ್ವದ ಆದೇಶ

Spread the love

Karnan-Supreme-Court

ನವದೆಹಲಿ, ಮೇ 9– ನ್ಯಾಯಾಲಯ ನಿಂದನೆ ಆರೋಪಕ್ಕೆ ಗುರಿಯಾಗಿರುವ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರನ್ನು ಆರು ತಿಂಗಳ ಕಾಲ ಜೈಲಿಗೆ ಕಳುಹಿಸಿ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ.   ನ್ಯಾಯಮೂರ್ತಿ ಕರ್ಣನ್ ಹೊರಡಿಸುವ ಆದೇಶಗಳ ಸಾರಾಂಶಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಕೋರ್ಟ್ ನಿರ್ಬಂಧ ಹೇರಿದೆ.   ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ 7 ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ಇಂದು ತನ್ನ ಆದೇಶಗಳನ್ನು ಕೂಡಲೇ ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ತಿಳಿಸಿತು.   ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 7 ಜಡ್ಜ್‍ಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಮೂರ್ತಿ ಕರ್ಣನ್ ವಿಧಿಸಿದ ಆದೇಶದ ಬಗ್ಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.ಇದರೊಂದಿಗೆ ಸುಪ್ರೀಂಕೋರ್ಟ್ ಮತ್ತು ಕರ್ಣನ್ ನಡುವೆ ನಡೆಯುತ್ತಿರುವ ಕಾನೂನು ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕಾನೂನು ಸಮರ ಮುಂದುವರೆಸಿರುವ ಕರ್ಣನ್:

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ತಮ್ಮ ಕಾನೂನು ಸಮರ ಮುಂದುವರಿಸಿದ್ದಾರೆ.   ಎಂಟು ನ್ಯಾಯಮೂರ್ತಿಗಳು 1989ರ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಶಿಕ್ಷಿಸಬಹುದಾದ ಅಪರಾಧ ಎಸಗಿದ್ದಾರೆ ಎಂದು ಕರ್ಣನ್ ಹೇಳಿದ್ದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಖೇಹರ್ ಹಾಗೂ ಇತರ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ ಚೆಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕುರ್, ಪಿಣಾಕಿ ಚಂದ್ರ ಘೋಷ್, ಕುರಿಯನ್ ಜೋಸೆಫ್ ಮತ್ತು ಆರ್.ಭಾನುಮತಿ ಅವರಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಪ್ರಕಟಿಸಿದ್ದರು.

ಏಳು ನ್ಯಾಯಮೂರ್ತಿಗಳ ಪೀಠವು ಸ್ವಯಂ ಪ್ರೇರಣೆಯಿಂದ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ಅವರು ನ್ಯಾಯಾಂಗ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಮಾಡದಂತೆ ನಿಷೇಧ ಹೇರಿತ್ತು.   ಈ ಎಂಟೂ ನ್ಯಾಯಮೂರ್ತಿಗಳು ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದಲಿತ ನ್ಯಾಯಮೂರ್ತಿಯೊಬ್ಬರಿಗೆ ಕಿರುಕುಳ ನೀಡಿ ಅವಮಾನಿಸಿದ್ದಾರೆ ಎಂದು ಕರ್ಣನ್ ದೂರಿದ್ದಾರೆ.  ಕಳೆದ ಗುರುವಾರದೊಳಗೆ (ಮೇ 4) ಕರ್ಣನ್ ಅವರ ಮಾನಸಿಕ ಆರೋಗ್ಯ ಪರೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ಈ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದ ಅವರು ನನ್ನ ಮಿದುಳು ಸ್ಥಿರವಾಗಿದೆ ಎಂದು ಹೇಳಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin