ನ್ಯಾಯಾಂಗ ನಿಂದನೆ : ಪ್ರತ್ಯುತ್ತರ ನೀಡಲು ನ್ಯಾ. ಕರ್ಣನ್‍ಗೆ 4 ವಾರ ಗಡುವು ನೀಡಿದ ಸುಪ್ರೀಂ

Karnana

ನವದೆಹಲಿ, ಮಾ.31-ನ್ಯಾಯಾಲಯ ನಿಂದನೆ ಆರೋಪಕ್ಕೆ ಗುರಿಯಾಗಿರುವ ಕಲ್ಕತ್ತ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಕರ್ಣನ್ ಅವರಿಗೆ ಆಡಳಿತಾತ್ಮಕ ಮತ್ತು ನ್ಯಾಯಾಂಗ ಕರ್ತವ್ಯಕ್ಕೆ ಮತ್ತೆ ಹಾಜರಾಗಲು ಸುಪ್ರೀಂಕೋರ್ಟ್ ಅವಕಾಶ ನಿರಾಕರಿಸಿದೆ. ಅಲ್ಲದೇ ನಾಲ್ಕು ವಾರಗಳ ಒಳಗೆ ನ್ಯಾಯಾಲಯ ನಿಂದನೆ ಪ್ರಕರಣದ ಬಗ್ಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.   ನ್ಯಾಯಾಲಯ ನಿಂದನೆ ಪ್ರಕರಣದ ವಿಚಾರಣೆಗಾಗಿ ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್ ನೀಡಿದ ಸೂಚನೆಯಂತೆ ನ್ಯಾಯಮೂರ್ತಿ ಕರ್ಣನ್ ಇಂದು ನ್ಯಾಯಾಲಯದ ಮುಂದೆ ಹಾಜರಾದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನು ಒಳಗೊಂಡ ಏಳು ನ್ಯಾಯಮೂರ್ತಿಗಳ ಪೀಠವು, ಈ ಹಿಂದೆ ಕೋರ್ಟ್‍ಗೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದರು.   ತಮ್ಮ ಪರವಾಗಿ ಯಾವುದೇ ವಕೀಲರನ್ನು ವಕಾಲತ್ತಿಗಾಗಿ ನಿಯೋಜಿಸದೇ ಸ್ವಯಂ ವಾದ ಮಂಡಿಸಿದ ಅವರು, ಸುಪ್ರೀಂಕೋರ್ಟ್ ತಮಗೆ ಆಡಳಿತಾತ್ಮಕ ಮತ್ತು ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸಲು ಅವಕಾಶ ನಿರಾಕರಿಸಿದೆ. ಇದರಿಂದ ತಮಗೆ ತುಂಬಾ ಘಾಸಿಯಾಗಿದೆ ಎಂದರು.

ನನಗೆ ನ್ಯಾಯಾಂಗ ಅಧಿಕಾರವನ್ನು ನೀಡದಿದ್ದರೆ ಇದರಿಂದ ನನ್ನ ಪವಿತ್ರ ವೃತ್ತಿಗೆ ಧಕ್ಕೆಯಾಗುತ್ತದೆ. ಇದರಿಂದ ಮುಂದಿನ ದಿನಾಂಕದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಹಾಜರಾಗಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.   ನಾನು ಸಂವಿಧಾನಿಕ ಹುದ್ದೆಯೊಂದನ್ನು ಹೊಂದಿದ್ದೇನೆ. ನನ್ನ ಘನತೆಗೆ ಧಕ್ಕೆಯಾಗಿದೆ. ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳದೇ ನನ್ನ ಹುದ್ದೆಯನ್ನು ಕಸಿದುಕೊಳ್ಳಲಾಗಿದೆ. ನಾನು ಮಾನಸಿಕವಾಗಿ ಜರ್ಝರಿತನಾಗಿದ್ದೇನೆ ಎಂದು ಕರ್ಣನ್ ವಾದ ಮಂಡಿಸಿದರು.

ನ್ಯಾ. ಕರ್ಣನ್ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಖೇಹರ್, ನೀವು ಕೋರ್ಟ್‍ಗೆ ಹಾಜರಾಗದೇ ನ್ಯಾಯಾಲಯ ನಿಂದನೆ ಮಾಡಿದ್ದೀರಿ. ನೀವು ಪ್ರತ್ಯುತ್ತರ ನೀಡಲು ಮಾನಸಿಕವಾಗಿ ಯೋಗ್ಯರಲ್ಲದಿದ್ದರೆ, ವೈದ್ಯಕೀಯ ದಾಖಲೆಗಳನ್ನು ನೀಡಬಹುದು ಎಂದು ಸಲಹೆ ಮಾಡಿದರು.
ಆಡಳಿತಾತ್ಮಕ ಮತ್ತು ನ್ಯಾಯಾಂಗ ಕರ್ತವ್ಯಕ್ಕೆ ಮತ್ತೆ ಹಾಜರಾಗಲು ನಿಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಪೀಠವು, ನಾಲ್ಕು ವಾರಗಳ ಒಳಗೆ ನ್ಯಾಯಾಲಯ ನಿಂದನೆ ಪ್ರಕರಣದ ಬಗ್ಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.

ವಿವಿಧ ಪ್ರಕರಣಗಳ ಸಂಬಂಧ ನ್ಯಾ.ಕರ್ಣನ್ ಅವರಿಗೆ ಸಲ್ಲಿಸಲಾಗಿದ್ದ ದೂರುಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಅವರ ಗೈರು ಹಾಜರಾಗಿದ್ದರು. ಇದರಿಂದಾಗಿ ಅವರು ವಿರುದ್ಧ ಜಾಮೀನುಸಹಿತ ಬಂಧನ ವಾರೆಂಟ್ ಹೊರಡಿಸಿದ್ದ ನ್ಯಾಯಾಲಯ ಮಾರ್ಚ್ 31ರಂದು ಖುದ್ದಾಗಿ ಹಾಜರಾಗುವಂತೆ ಸೂಚಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin